ಖಾಸಗಿ ಶಾಲೆ ಶುಲ್ಕ 30% ಕಡಿತ ಅಧಿಕೃತ ಆದೇಶ : ಆದೇಶ ಪಾಲನೆಗೆ ಜಿಲ್ಲಾ ಹಂತದಲ್ಲಿ ಸಮಿತಿ ರಚನೆ

ಬೆಂಗಳೂರು : ಖಾಸಗಿ ಶಾಲೆಗಲ್ಲಿ ಶೇ.30ರಷ್ಟು ಶುಲ್ಕ ಕಡಿತ ಮಾಡುವ ಮೂಲಕ ಪೋಷಕರಿಗೆ ರಿಲೀಫ್ ಕೊಟ್ಟಿದ್ದ ಶಿಕ್ಷಣ ಇಲಾಖೆ ಇದೀಗ ಅಧಿಕೃತ ಆದೇಶ ಹೊರಡಿಸಿದೆ. 2 ಕಂತುಗಳಲ್ಲಿ ಶುಲ್ಕ ಪಾವತಿಗೆ ಸರಕಾರ ಅವಕಾಶ ಕಲ್ಪಿಸಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಕಡಿತ ಮಾಡುವಂತೆ ಪೋಷಕರು ಸರಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದರು.

ಪ್ರಮುಖವಾಗಿ 2020-21ನೇ ಸಾಲಿನಲ್ಲಿನ ಶಾಲಾ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಶೇ.30ರಷ್ಟು ವಿನಾಯಿತಿಯನ್ನು ನೀಡಲಾಗಿದೆ. ಶಾಲಾ ಬೋಧನಾ ಶುಲ್ಕವನ್ನು ಹೊರತು ಪಡಿಸಿ ಶಾಲೆಗಳು ಬೇರೆ ಯಾವುದೇ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುವಂತಿಲ್ಲ. ಒಂದೊಮ್ಮೆ ಪೋಷಕರು ಪೂರ್ಣ ಶುಲ್ಕ ಪಾವತಿ ಮಾಡಿದ್ದರೆ, ಅಂತಹ ಶುಲ್ಕವನ್ನು ಮುಂದಿನ ಶೈಕ್ಷಣಿಕ ಅವಧಿಗೆ ಹೊಂದಾಣಿಕೆ ಮಾಡಲು ಸೂಚಿಸಲಾಗಿದೆ. ಅಲ್ಲದೇ 2 ಹಂತಗಳಲ್ಲಿ ಶಾಲಾ ಶುಲ್ಕ ಪಾವತಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಶಿಕ್ಷಣ ಇಲಾಖೆ ಹೊರಡಿಸಿರುವ ಶಾಲಾ ಶುಲ್ಕ ಕಡಿತ ಆದೇಶ ರಾಜ್ಯದಲ್ಲಿರುವ ಎಲ್ಲಾ ಸಿಬಿಎಸ್ಇ, ಐಸಿಎಸ್ ಇ ಹಾಗೂ ರಾಜ್ಯ ಪಠ್ಯಕ್ರಮದಲ್ಲಿ ಪಾಠ ಬೋಧನೆ ಮಾಡುವ ಎಲ್ಲಾ ಶಾಲೆಗಳಿಗೂ ಅನ್ವಯವಾಗಲಿದೆ ಎಂದು ತಿಳಿಸಿದೆ. ಇನ್ನು ಶಾಲಾ ಶುಲ್ಕ ಕಡಿತ ಆದೇಶ ಪಾಲನೆಗೆ ಜಿಲ್ಲೆಗಳಲ್ಲಿ ಸಮಿತಿಗಳನ್ನು ರಚಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

Comments are closed.