ವಿಡಿಯೋ ಕಾಲ್ ತಂದ ಅವಾಂತರ…! ರಸ್ತೆಯಲ್ಲೇ ಹೆಣವಾದ್ಲು ಯೋಧನ ಪತ್ನಿ…!!

ಬಾಗಲಕೋಟೆ: ಎಲ್ಲ ಅಂದುಕೊಂಡಂತೆ ಆಗಿದ್ದರೇ ಆ ಯೋಧ ಹೆಂಡತಿಯಿಂದ ಟಾಟಾ ಬೈಬೈ ಹೇಳಿಸಿಕೊಂಡು ಇಂದು ಜಮ್ಮುಕಾಶ್ಮೀರಕ್ಕೆ ಕರ್ತವ್ಯಕ್ಕೆ ತೆರಳಬೇಕಿತ್ತು.

ಆದರೇ ಆ ವಿಧಿ ಯೋಧನಿಗೆ ಪತ್ನಿ ಶಾಶ್ವತವಾಗಿ ಗುಡ್ ಬೈ ಹೇಳುವಂತೆ ಮಾಡಿದೆ. ಬಾಗಲಕೋಟೆಯ ಹುನಗುಂದ ತಾಲೂಕಿನ ಮುಗನೂರು ಬಳಿ ಮೊಬೈಲ್ ಗೆ ಬಂದ ವಿಡಿಯೋ ಕಾಲ್ ರಿಸೀವ್ ಮಾಡಿ ಮಾತನಾಡುತ್ತ ರಸ್ತೆ ಹಂಪ್ ಜಂಪ್ ಮಾಡಿದ ಯೋಧ ಶೇಖರಯ್ಯನ ಎಡವಟ್ಟಿನಿಂದ ಹಿಂದೆ ಕೂತಿದ್ದ ಪತ್ನಿ ಪುಷ್ಪವತಿ ಬೈಕ್‌ನಿಂದ ಬಿದ್ದು ಚಿರನಿದ್ರೆಗೆ ಜಾರಿದ್ದಾರೆ.

ಸೋಮವಾರ ಜಮ್ಮುಕಾಶ್ಮೀರಕ್ಕೆ ತೆರಳಬೇಕಿದ್ದ ಯೋಧ ಶೇಖರಯ್ಯ ವಿಭೂತಿಮಠ್ ನಿನ್ನೆ ಸಂಜೆ ಪತ್ನಿಯನ್ನು ಆಕೆಯ ತವರು ಮನೆಗೆ ಬಿಡಲು ತೆರಳುತ್ತಿದ್ದರು.ಈ ವೇಳೆ ಬೈಕ್ ಚಲಾಯಿಸುತ್ತಿದ್ದಾಗ ಶೇಖರಯ್ಯ ಪುತ್ರ ವಿಡಿಯೋ ಕಾಲ್ ಮಾಡಿದ್ದಾನೆ ಎನ್ನಲಾಗಿದೆ. ಮಗನ ವಿಡಿಯೋ ಕಾಲ್ ಅಟೆಂಡ್ ಮಾಡಿದ ಶೇಖರಯ್ಯ ಹಂಪ್‌ ನೋಡದೆ ಬೈಕ್ ಚಲಾಯಿಸಿದ್ದಾರೆ.

ಇದರಿಂದ ಹಂಪ್ ಮೇಲಿಂದ ಬೈಕ್ ಏಗರಿದ್ದು, ಹಿಂದೆ ಕೂತಿದ್ದ ಪುಷ್ಪಲತಾ ರಸ್ತೆ ಮೇಲೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆಗೆ ಏಟು ಬಿದ್ದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ತಮ್ಮ ತಪ್ಪಿನಿಂದ ರಸ್ತೆಯಲ್ಲೇ ಹೆಣವಾದ ಪತ್ನಿಯ ಹೆಣ ಅಪ್ಪಿಕೊಂಡು ಯೋಧ ಶೇಖರಯ್ಯ ಬಿದ್ದು ಹೊರಳಾಡುತ್ತಿದ್ದ ದೃಶ್ಯ ಎಂಥವರ ಮನಸ್ಸನ್ನು ಕಲಕುವಂತಿತ್ತು.

ಕಳೆದ ಕೆ‌ಲ ದಿನಗಳ ಹಿಂದಷ್ಟೇ ಮಂಡ್ಯದಲ್ಲಿ ಬೈಕ್ ನಲ್ಲಿ ಬರುತ್ತಿದ್ದ ದಂಪತಿಗಳ ಪೈಕಿ ಪತಿ ಹಂಪ್ ಹಾರಿಸಿದ್ದು, ನಿಯಂತ್ರಣಕ್ಕೆ ಸಿಗದೇ ಪತ್ನಿ ಕೈಯಿಂದ ೧ ವರ್ಷದ ಮಗು ಜಾರಿ ಬಿದ್ದ ಘಟನೆ ನಡೆದಿದ್ದು ಜನರು ಹಂಪ್ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.

Comments are closed.