ಐಎಂಎ ಪ್ರಕರಣ: ರೋಷನ್ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ

ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ರೋಷನ್ ಬೇಗ್​ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣದಡಿಯಲ್ಲಿ ಭಾನುವಾರ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ರೋಷನ್​ ಬೇಗ್ ಅವರನ್ನು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿದ್ದರು. ಇಂದು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಅಧಿಕಾರಿಗಳು ಅರ್ಜಿ ಸಲ್ಲಿಸಲಿದ್ದಾರೆ. ಬಾಡಿವಾರೆಂಟ್ ಮೇಲೆ ಕಸ್ಟಡಿಗೆ ಪಡೆದು ಸಿಬಿಐ ಅಧಿಕಾರಿಗಳೂ ವಿಚಾರಣೆ ಮಾಡಲಿದ್ದಾರೆ.

ಇದರ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳ ತಂಡ ಮನೆಯ ಮೇಲೆ ದಾಳಿ ನಡೆಸಿದೆ. ಇಬ್ಬರು ಮಹಿಳಾ ಅಧಿಕಾರಿಗಳು ಸೇರಿ ಒಟ್ಟು 13 ಮಂದಿ ಸಿಬಿಐ ಅಧಿಕಾರಿಗಳು ರೋಷನ್ ಬೇಗ್ ನಿವಾಸಕ್ಕೆ ಆಗಮಿಸಿದ್ದಾರೆ. ಕೋಲ್ಸ್​ ಪಾರ್ಕ್​ನಲ್ಲಿರುವ ರೋಷನ್ ಬೇಗ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಮೊದಲಿಗೆ ಸಿಬಿಐ ಅಧಿಕಾರಿಗಳು ಮನೆಯ ಹೊರಗೆ ಮೂಲೆ ಮೂಲೆಯೂ ತಪಾಸಣೆ ಮಾಡಿದ್ದಾರೆ. ಬಳಿಕ ಮನೆಯ ಒಳಗೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಭದ್ರತಾ ಸಿಬ್ಬಂದಿಗೆ ಯಾರನ್ನೂ ಒಳಗೆ ಬಿಡದಂತೆ ಸಿಬಿಐ ಅಧಿಕಾರಿಗಳು ಸೂಚಿಸಿದ್ದಾರೆ.

ರೋಷನ್ ಬೇಗ್ ಸುಮಾರು 200ಕ್ಕೂ ಅಧಿಕ ಕೋಟಿ ಹಣವನ್ನು ಐಎಂಎ ಮಾಲೀಕ ಮನ್ಸೂರ್ ಖಾನ್​ನಿಂದ ಪಡೆದಿದ್ದ ಆರೋಪ ಕೇಳಿ ಬಂದಿದೆ. ಮನ್ಸೂರ್​​​ ವಿಡಿಯೋದಲ್ಲಿಯೂ ಹಣ ಪಡೆದ ವಿಚಾರ ಪ್ರಸ್ತಾಪ ಮಾಡಿದ್ದ. ಜೊತೆಗೆ ಕೆಲವು ಸಾಕ್ಷ್ಯಗಳನ್ನು ನಾಶಪಡಿಸಿರುವ ಆರೋಪ ರೋಷನ್ ಬೇಗ್ ಮೇಲಿದೆ. ಈ ಹಿನ್ನೆಲೆ ಸಿಬಿಐ ಅಧಿಕಾರಿಗಳು ಸಾಕಷ್ಟು ದಾಖಲೆಗಳನ್ನು ಕಲೆಹಾಕಿದ್ದರು. ನಿನ್ನೆ ಬೇಗ್ ನಿವಾಸಕ್ಕೆ ಹೋಗಿ ಕರೆದುಕೊಂಡು ಬಂದಿದ್ದ ಸಿಬಿಐ ಅಧಿಕಾರಿಗಳು, ಸಂಜೆಯವರೆಗೂ ವಿಚಾರಣೆ ಮಾಡಿ ಬಳಿಕ ಬಂಧಿಸಿದ್ದರು.

Comments are closed.