ಬೆಂಗಳೂರು : ಮನೆಯೊಂದರಲ್ಲಿ ನಿಗೂಢವಾಗಿ ಸ್ಪೋಟ ಸಂಭವಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಹಂಪಿನಗರದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ವೃದ್ದ ದಂಪತಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸೂರ್ಯನಾರಾಯಣ ಶೆಟ್ಟಿ, ಪುಷ್ಪಾವತಮ್ಮ ಎಂಬವರೇ ಗಾಯಗೊಂಡ ದಂಪತಿಯಾಗಿದ್ದಾರೆ. ಬೆಂಗಳೂರಿನ ಹಂಪಿನಗರದಲ್ಲಿರುವ ಎರಡು ಅಂತಸ್ಥಿನ ಕಟ್ಟಡದ ಮೊದಲ ಮಹಡಿಯಲ್ಲಿ ದಂಪತಿಗಳು ವಾಸವಾಗಿದ್ದರು. ರಾತ್ರಿ ಸುಮಾರು 12.45ರ ಸುಮಾರಿಗೆ ನಿಗೂಢ ಸ್ಪೋಟ ಸಂಭವಿಸಿದೆ. ಕೂಡಲೇ ದಂಪತಿಗಳನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಪೋಟದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದು, ಅಕ್ಕಪಕ್ಕದ ಸುಮಾರು ಐದಕ್ಕೂ ಅಧಿಕ ಮನೆಯ ಕಿಟಕಿ ಗಾಜುಗಳು ಕೂಡ ಒಡೆದು ಹೋಗಿದೆ. ಮನೆಯ ಮುಂದೆ ಹಾದು ಹೋಗಿರುವ ವಿದ್ಯುತ್ ವಯರ್ ಕಟ್ ಆಗಿದ್ದು, ಸ್ಪೋಟದ ಸದ್ದು ಸುಮಾರು ಒಂದು ಕಿ.ಮೀ. ದೂರದ ವರೆಗೆ ಕೇಳಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.