ವಿದ್ಯುತ್,ವಾಟರ್ ದರ ಏರಿಕೆ ಶಾಕ್ ಬಳಿಕ ಸಿಲಿಕಾನ್ ಸಿಟಿ ಜನರಿಗೆ ಪಾರ್ಕ್ ಶಾಕ್ ಎದುರಾಗಿದೆ. ಈಗ ಸ್ವಚ್ಛ ಗಾಳಿ ಉಸಿರಾಡಿಸುತ್ತ ವಾಕ್ ಮಾಡೋಣ ಅಂತ ಲಾಲ್ ಭಾಗ್ ಗೆ ಹೋಗೋ ಮುನ್ನ ಜೇಬು ಮುಟ್ಟಿನೋಡಿಕೊಳ್ಳುವ ಸ್ಥಿತಿ ಎದುರಾಗಿದ್ದು, ಲಾಲ್ಭಾಗ್ ಎಂಟ್ರಿ ಫೀಸ್ ಹೆಚ್ಚಿಸಿದೆ ತೋಟಗಾರಿಕಾ ಇಲಾಖೆ.

ಕೊರೋನಾದಿಂದ ಎಲ್ಲ ಸ್ತಬ್ಧವಾಗುತ್ತಿದ್ದಂತೆ ಬೆಂಗಳೂರಿನ ಪರಿಸರ ಪ್ರೇಮಿಗಳ ಹಾಟ್ ಸ್ಪಾಟ್ ಕೆಂಪುತೋಟವೂ ಜನರಿಲ್ಲದೇ ಬಣಗುಡುತ್ತಿತ್ತು. ಈಗ ಕೊರೋನಾ ಲಾಕ್ ಡೌನ್ ತೆರವಾದ ಬಳಿಕ ಜನರು ಲಾಲ್ ಭಾಗ್ ನತ್ತ ಮುಖಮಾಡುತ್ತಿದ್ದಾರೆ. ಇದನ್ನೇ ಕಾಯುತ್ತಿದ್ದ ತೋಟಗಾರಿಕಾ ಇಲಾಖೆ ಲಾಲ್ ಭಾಗ್ ಪ್ರವೇಶ ಶುಲ್ಕ ಹೆಚ್ಚಿಸಿ ಜನರಿಗೆ ಶಾಕ್ ನೀಡಿದೆ.

ವಯಸ್ಕರ ಪ್ರವೇಶಕ್ಕೆ 25 ರೂಪಾಯಿ ಇದ್ದ ಪ್ರವೇಶ ದರ ಈಗ 30 ರೂಪಾಯಿಗಳಾಗಿದ್ದು, 6 ರಿಂದ 12 ವರ್ಷದ ಮಕ್ಕಳ ಪ್ರವೇಶ ದರ 10 ರೂಪಾಯಿಗೆ ನಿಗದಿಯಾಗಿದೆ. ಕೇವಲ ಜನರ ಪ್ರವೇಶದರ ಮಾತ್ರವಲ್ಲ ಪಾರ್ಕಿಂಗ್ ಶುಲ್ಕು ಕೂಡ ಏರಿಕೆಯಾಗಿದ್ದು, ಮೂರು ಗಂಟೆಗಳ ಅವಧಿಗೆ ನೀವು ಪಾವತಿಸುವ ದರ ಈಗ 5 ರೂಪಾಯಿ ಏರಿಕೆ ಕಂಡಿದೆ.

3 ಗಂಟೆಗೂ ಅಧಿಕಕಾಲದ ಪಾರ್ಕಿಂಗ್ ದರದಲ್ಲಿ ವಾಹನದ ಗಾತ್ರ ಆಧರಿಸಿ 5 ರಿಂದ 25 ರೂಪಾಯಿಯವರೆ ಹೆಚ್ಚಿಸಲಾಗಿದೆ. ಈ ಪರಿಸ್ಕೃತ ದರ ಫೆ.2 ರಿಂದಲೇ ಜಾರಿಗೆ ಬಂದಿದೆ.

ಲಾಲ್ಭಾಗ್ ಸಮಿತಿ ಸಭೆಯಲ್ಲಿ ಚರ್ಚಿಸಿ ಈ ದರ ಪರಿಷ್ಕರಣೆ ಜಾರಿಗೆ ತರಲಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಜಿ.ಕುಸುಮಾ ತಿಳಿಸಿದ್ದಾರೆ. ಅಲ್ಲದೇ ದೇಶದ ವಿವಿಧೆಡೆ ಉದ್ಯಾನವನಗಳ ಎಂಟ್ರಿ ಫೀಸ್ 50 ರೂಪಾಯಿಯಷ್ಟಿದ್ದು, ಅದಕ್ಕೆ ಹೋಲಿಸಿದರೇ ಲಾಲ್ಬಾಗ್ ದರ ಕಡಿಮೆಯೇ ಇದೆ ಎಂದು ಸಮಜಾಯಿಸಿ ಕೂಡ ನೀಡಿದ್ದಾರೆ.

ಪ್ರತಿವರ್ಷ ಸ್ವಾತಂತ್ರ್ಯದಿನಾಚರಣೆ ವೇಳೆ ಫಲ-ಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿತ್ತು. ಇದರಿಂದ ತೋಟಗಾರಿಕಾ ಇಲಾಖೆಗೆ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತಿತ್ತು. ಆದರೆ ಈ ಭಾರಿ ಕೊರೋನಾ ಹಿನ್ನೆಲೆಯಲ್ಲಿ ಪ್ಲವರ್ ಶೋ ರದ್ದುಗೊಂಡಿದೆ. ಹೀಗಾಗಿ ನಿರ್ವಹಣೆಗೆ ಆದಾಯ ಸಂಗ್ರಹಿಸುವ ನಿಟ್ಟಿನಲ್ಲಿ ಬೆಲೆ ಏರಿಸಲಾಗಿದೆ ಎನ್ನಲಾಗುತ್ತಿದೆ.