ಬಿಬಿಎಂಪಿ ಬೆಡ್ ಹಂಚಿಕೆ ಅವ್ಯವಹಾರ….! ಸಾಫ್ಟ್ ವೇರ್ ಮರುವಿನ್ಯಾಸ ಖಚಿತಪಡಿಸಿದ ಸಂಸದ ತೇಜಸ್ವಿಸೂರ್ಯ…!!

ರಾಜ್ಯ ರಾಜಕಾರಣವನ್ನೇ ಬೆಚ್ಚಿ ಬೀಳಿಸಿದ್ದ ಬಿಬಿಎಂಪಿ ವಾರ್ ರೂಂ ನಡೆಸುತ್ತಿದ್ದ ಹೇಸಿಗೆ ಹಾಸಿಗೆ ಹಗರಣಕ್ಕೆ ಅಂತ್ಯ ಹಾಡಲಾಗಿದೆ. ಬಿಬಿಎಂಪಿ ಬೆಡ್ ಬುಕ್ಕಿಂಗ್ ಗೆ ಬಳಸಲಾಗುತ್ತಿದ್ದ ಸಾಫ್ಟ್ ವೇರ್ ಮರುವಿನ್ಯಾಸಕ್ಕೆ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದರು. ಇದಕ್ಕೆ ಇನ್ಪೋಸಿಸ್ ಸಹಸಂಸ್ಥಾಪಕ ನಂದನ್ ನಿಲೇಕಣಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ಬಿಬಿಎಂಪಿಯಲ್ಲಿ ಈಗಾಗಲೇ ಬಳಕೆಯಲ್ಲಿದ್ದ ಬೆಡ್ ಹಂಚಿಕೆ ಸಾಫ್ಟವೇರ್ ನ್ನು ವಾರ್ ರೂಂ ಸದಸ್ಯರು ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಅಕ್ರಮ ಎಸಗಿದ್ದರು. ಇದನ್ನು ಸಂಸದ ತೇಜಸ್ವಿಸೂರ್ಯ,ಶಾಸಕರಾದ ಸತೀಶ್ ರೆಡ್ಡಿ, ಉದಯಗರುಡಾಚಾರ ಸೇರಿ ಬಯಲಿಗೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸಾಫ್ಟ್ ವೇರ್ ಮರುವಿನ್ಯಾಸಗೊಳಿಸಲು ನಂದನ್ ನಿಲೇಕಣಿಯವರನ್ನು ಕೋರಲಾಗಿತ್ತು.

ಈ ಹಿನ್ನೆಲೆಯಲ್ಲಿ ನಂದನ್ ನಿಲೇಕಣಿವರು ತಂಡವನ್ನು ನಿಯೋಜಿಸಿದ್ದು, ಬಿಬಿಎಂಪಿ ಬೆಡ್ ಹಂಚಿಕೆ ಸಾಫ್ಟ್ ವೇರ್ ಗೆ ಹೊಸ ರೂಪ ನೀಡಲಾಗುತ್ತಿದೆ.  ಈ ವಿಚಾರನ್ನು ಸ್ವತಃ ಸಂಸದ ತೇಜಸ್ವಿಸೂರ್ಯ ಖಚಿತಪಡಿಸಿದ್ದಾರೆ. ನುರಿತ ತಂತ್ರಜ್ಞರನ್ನು ಒಳಗೊಂಡಿರುವ  ಈ ಸಾಫ್ಟ್ ವೇರ್ ತಂಡವು ಐಸ್ಪಿರಿಟ್ ಹಾಗೂ ಪ್ರಾಡಕ್ಟ್ ನೇಷನ್ ಸಂಸ್ಥೆಗಳ ಸಹಯೋಗದೊಂದಿಗೆ ಮಾನವ ಹಸ್ತಕ್ಷೇಪ ರಹಿತ ಪಾರದರ್ಶಕ ಸಾಫ್ಟ್ ವೇರ್ ಅಭಿವೃದ್ಧಿಗೊಳಿಸಲು ಶ್ರಮಿಸುತ್ತಿದೆ. ಈ ತಂಡಕ್ಕೆ ಬೆಂಗಳೂರು ಜನತೆಯ ಪರವಾಗಿ ಧನ್ಯವಾದ ಎಂದಿದ್ದಾರೆ.

ಮಂಗಳವಾರ ಸಂಸದ ತೇಜಸ್ವಿಸೂರ್ಯ ಹಾಗೂ ಬೆಂಗಳೂರು ಶಾಸಕರು ವಾರ್ ರೂಂಗೆ ಭೇಟಿ ನೀಡಿದ್ದಲ್ಲದೇ ಕೊರೋನಾ ರೋಗಿಗಳ ಹೆಸರಿನಲ್ಲಿ ಬೆಡ್ ಬುಕ್ ಮಾಡಿಕೊಂಡು ಅಗತ್ಯ ಉಳ್ಳವರಿಗೆ ಅತ್ಯಂತ ಹೆಚ್ಚು ಬೆಲೆಗೆ ಬೆಡ್ ಮಾರುತ್ತಿದ್ದ ಬಿಬಿಎಂಪಿ ಅಧಿಕಾರಿಗಳು ಹಾಗೂ ಏಜೆಂಟ್ ರ ಅಕ್ರಮವನ್ನು ಬಯಲಿಗೆಳೆದಿದ್ದರು.

ಆ ಬಳಿಕ ಈ ವಂಚಕರ ಹಸ್ತಕ್ಷೇಪಕ್ಕೆ ಒಳಪಟ್ಟ ಸಾಫ್ಟ್ ವೇರ್ ಅಪ್ಡೇಟ್ ಮಾಡಲು ಹಾಗೂ ಮರುವಿನ್ಯಾಸಗೊಳಿಸಲು ತಜ್ಞರ ಸಹಾಯ ಕೋರಲಾಗಿತ್ತು. ಇದೀಗ ಸಾಫ್ಟ್ ವೇರ್ ವಿನ್ಯಾಸಗೊಳ್ಳುತ್ತಿದ್ದು, ಇನ್ಮುಂದೆ ಬಡವರಿಗೆ ಹಾಗೂ ಅಗತ್ಯ ಉಳ್ಳವರಿಗೆ ಆಸ್ಪತ್ರೆಯಲ್ಲಿ ಬೆಡ್ ಪಡೆಯುವುದು ದೊಡ್ಡ ಸಮಸ್ಯೆಯಾಗದಿರುವಂತೆ ಕ್ರಮಜರುಗಿಸಲು ಸಿದ್ಧತೆ ನಡೆದಿದೆ.

Comments are closed.