ಸಾಲಿಗ್ರಾಮ : ಆಕೆಯದ್ದು ಇಳಿವಯಸ್ಸು. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ವೃದ್ದ ಮಹಿಳೆ ಕೊರೊನಾ ನಿರ್ಮೂಲನೆಗೆ ಪಣತೊಟ್ಟಿದ್ದಾರೆ. ಭಿಕ್ಷೆ ಬೇಡಿ ಬಂದ ಹಣವನ್ನು ಸಂಗ್ರಹಿಸಿದ 1 ಲಕ್ಷ ರೂಪಾಯಿಯನ್ನು ದೇವಾಲಯದ ಅನ್ನದಾನಕ್ಕೆ ದೇಣಿಗೆ ನೀಡುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಹೌದು, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಕಂಚಿಗೋಡು ನಿವಾಸಿ ಅಶ್ವಥಮ್ಮ ಅಯ್ಯಪ್ಪ ಸ್ವಾಮಿಯ ಪರಮಭಕ್ತೆ. ವರ್ಷದ ಬಹುತೇಕ ತಿಂಗಳ ಕಾಲ ಮಾಲಾಧಾರಣೆಯನ್ನ ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಭಿಕ್ಷೆ ಬೇಡುತ್ತಾರೆ. ಮನೆಯಲ್ಲಿ ಬಡತನವಿದ್ದರೂ ಕೂಡ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸುತ್ತಿದ್ದಾರೆ.

ಕೊರೊನಾ ಹೆಮ್ಮಾರಿ ತೊಲಗಿ, ಲೋಕಕ್ಕೆ ಕಲ್ಯಾಣವಾಗಲಿ ಅನ್ನೋ ಕಾರಣಕ್ಕೆ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರವೆನಿಸಿರುವ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನಕ್ಕೆ ತಾನು ಭಿಕ್ಷೆ ಬೇಡಿ ಸಂಗ್ರಹಿಸಿದ್ದ 1 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಅಲ್ಲದೇ ಈ ಹಣವನ್ನು ಅನ್ನದಾನಕ್ಕೆ ವಿನಿಯೋಗಿಸುವಂತೆಯೂ ಮನವಿ ಮಾಡಿದ್ದಾರೆ. ಅಶ್ವಥಮ್ಮ ಬೆಳಗ್ಗೆಯಿಂದ ಸಂಜೆಯ ವರೆಗೂ ಭಿಕ್ಷೆ ಬೇಡುತ್ತಾರೆ. ಸಾರ್ವಜನಿಕರು ನೀಡಿದ ಹಣವನ್ನು ನಿತ್ಯವೂ ಪಿಗ್ಮಿ ಕಟ್ಟುತ್ತಾರೆ. ಲಕ್ಷಾಂತರ ರೂಪಾಯಿ ಹಣ ಸಂಗ್ರಹವಾದ ನಂತರದಲ್ಲಿ ತಾವು ಶಬರಿ ಮಲೆಯ ಅಯ್ಯಪ್ಪ ಸ್ವಾಮಿಯ ಯಾತ್ರೆ ಕೈಗೊಳ್ಳುವ ಮೊದಲು ಯಾವುದಾದರೊಂದು ದೇವಸ್ಥಾನಕ್ಕೆ ದೇಣಿಗೆ ನೀಡುತ್ತಾರೆ. ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರವೇರಿಸಿದ ನಂತರವೇ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ.

ಈಗಾಗಲೇ ತನ್ನೂರಾಗಿರುವ ಕಂಚಿಗೋಡು ದೇವಸ್ಥಾನಕ್ಕೆ ಒಂದೂವರೆ ಲಕ್ಷ, ಪಂಪಾ ಸನ್ನಿಧಾನಕ್ಕೆ 1 ಲಕ್ಷ, ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನಕ್ಕೆ ಒಂದೂವರೆ ಲಕ್ಷ ರೂಪಾಯಿ, ಸೇರಿದಂತೆ ಈಗಾಗಲೇ ಲಕ್ಷಾಂತರ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಕರಾವಳಿ ಭಾಗದಲ್ಲಿ ಅಜ್ಜಿ ಎಂದೇ ಜನಜನಿತರಾಗಿರುವ ಅಶ್ವತ್ಥಮ್ಮ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನಕ್ಕೆ ದೇಣಿಗೆಯನ್ನು ಸಮರ್ಪಿಸಿದ್ದು, ಅರ್ಚಕರಾದ ವೇ.ಮೂ ಜನಾರ್ದನ ಅಡಿಗ ಮತ್ತು ವ್ಯವಸ್ಥಾಪಕರಾದ ಕೆ. ನಾಗರಾಜ ಹಂದೆ ದೇವರ ಪ್ರಸಾದ ನೀಡಿ ಗೌರವಿಸಿದರು. ಸಾಲಿಗ್ರಾಮ ಮಯ್ಯ ಟಿಫೀನ್ ರೂಂನ ಮಾಲೀಕರಾದ ರಾಘವೇಂದ್ರ ಹೆಬ್ಬಾರ್ ಮತ್ತು ಛಾಯಾಗ್ರಾಹಕರಾದ ರವಿಕುಮಾರ್ ಇವರು ಉಪಸ್ಥಿತರಿದ್ದರು.

ದೇಶದ ಉದ್ದಗಲಕ್ಕೂ ಇರುವ ಹಲವು ಧಾರ್ಮಿಕ ಕ್ಷೇತ್ರಗಳ ಯಾತ್ರೆಯನ್ನು ಕೈಗೊಂಡಿರುವ ಅಶ್ಚತ್ಥಮ್ಮ ಮಾಲಾಧಾರಣೆಯನ್ನು ಮಾಡಿದ್ದು, ಫೆಬ್ರವರಿ 2 ರಂದು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವರ ಸನ್ನಧಿಯಲ್ಲಿ ಇರುಮುಡಿ ಕಟ್ಟಲಿದ್ದು, ಅಂದು ನಡೆಯುವ ಅನ್ನದಾನದಲ್ಲಿ ಎಲ್ಲರೂ ಭಾಗಿಯಾಗುವಂತೆಯೂ ವಿನಂತಿಸಿದ್ದಾರೆ.