ಕೊನೆಗೂ ಶಶಿಕಲಾ ಪುರಪ್ರವೇಶಕ್ಕೆ ಸಿಕ್ತು ಮುಹೂರ್ತ…..! ಫೆ.7 ಕ್ಕೆ ತಮಿಳುನಾಡಿಗೆ ಎಂಟ್ರಿ ಕೊಡ್ತಾರೆ ಚಿನ್ನಮ್ಮ…!!

ತಮಿಳುನಾಡಿನ ಚುನಾವಣೆಯಲ್ಲಿ ಭಾರಿ ಪ್ರಭಾವ ಬೀರಲಿದ್ದಾರೆ ಎಂದು ನೀರಿಕ್ಷಿಸಲಾಗುತ್ತಿರುವ ಉಚ್ಛಾಟಿತ ಎಐಎಡಿಎಂಕೆ ನಾಯಕಿ ಹಾಗೂ ಜಯಲಲಿತಾ ಆಪ್ತೆ ಶಶಿಕಲಾ ತಮಿಳುನಾಡು ಪುರ ಪ್ರವೇಶಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ತಮಿಳುನಾಡು ಪ್ರವೇಶಕ್ಕೆ ಜ್ಯೋತಿಷ್ಯಿಗಳಿಂದ ಮುಹೂರ್ತ ಪಡೆದಿದ್ದ ಶಶಿಕಲಾ ಫೆ.7 ರಂದು ತಮಿಳುನಾಡು ಪ್ರವೇಶಿಸಲಿದ್ದಾರೆ.

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಶಿಕಲಾ, ಬಿಡುಗಡೆಗೆ ಕೆಲ ದಿನಗಳು ಬಾಕಿ ಇರುವಾಗಲೇ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ  ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ನಾಲ್ಕು ವರ್ಷಗಳ ಶಿಕ್ಷೆ ಪೊರೈಸಿದ ಶಶಿಕಲಾರನ್ನು ಜ.27 ರಂದು ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು.

ಆದರೆ ಕೊರೋನಾ ಸೋಂಕು ಪರೀಕ್ಷೆಗಾಗಿ ಆಸ್ಪತ್ರೆಯಲ್ಲೇ ಇದ್ದ ಶಶಿಕಲಾ ಕೊರೋನಾ ನೆಗೆಟಿವ್ ವರದಿ ಬಳಿಕ ತಮಿಳುನಾಡಿಗೆ ಒಳ್ಳೆಯ ಮುಹೂರ್ತದಲ್ಲಿ ಪ್ರವೇಶಿಸಬೇಕೆಂಬ ಕಾರಣಕ್ಕೆ ಕರ್ನಾಟಕದಲ್ಲೇ ಉಳಿದುಕೊಂಡಿದ್ದರು. ದೇವನಹಳ್ಳಿಯ ಪ್ರೆಸ್ಟಿಜ್ ಗಾಲ್ಫ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದ ಶಶಿಕಲಾ ಫೆ.7 ಭಾನುವಾರ ತಮಿಳುನಾಡಿಗೆ ತೆರಳಲಿದ್ದಾರೆ.

ರಸ್ತೆಮಾರ್ಗವಾಗಿ ಚೈನೈಗೆ ತೆರಳುವ ಶಶಿಕಲಾ, ಅಮ್ಮನ ಸಮಾಧಿಗೆ ಭೇಟಿ ನೀಡಲಿದ್ದಾರೆ. ಬಳಿಕ ಎಎಂಎಂಕೆ ಪಕ್ಷದಿಂದ ರಾಜಕೀಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಅಮ್ಮ ಮಕ್ಕಳ ಮನ್ನೇತ್ರ ಕಳಗಂ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಮಾಹಿತಿ ನೀಡಿದ್ದಾರೆ.

ಹೊಸೊರು ರಸ್ತೆಯಿಂದ ಚೈನೈನವರೆಗೆ 350 ಕಿಲೋಮೀಟರ್ ಶಶಿಕಲಾರನ್ನು ಅದ್ದೂರಿಯಾಗಿ ಮೆರವಣಿಗೆ ಮೂಲಕ ಕರೆದೊಯ್ಯಲು ಸಿದ್ಧತೆ ನಡೆದಿದೆ. ಆದರೆ ಇದಕ್ಕೆ ಪೊಲೀಸ್ ಅನುಮತಿ ಇನ್ನು ಸಿಕ್ಕಿಲ್ಲ ಎನ್ನಲಾಗಿದೆ. ತಮಿಳುನಾಡಿನ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಶಶಿಕಲಾ ಅದಕ್ಕಾಗಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಆದರೆ ಶಶಿಕಲಾ ಅವರನ್ನು ಮತ್ತೆ ಎಐಎಡಿಎಂಕೆಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಪಳನಿಸ್ವಾಮಿ ಹೇಳಿದ್ದು, ಎಐಎಡಿಎಂಕೆ ಈಗಾಗಲೇ ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಘೋಷಿಸಿದೆ. 2021 ರ ಮೇನಲ್ಲಿ ತಮಿಳುನಾಡು ವಿಧಾನಸಭೆಯ 243 ಕ್ಷೇತ್ರಗಳಿಗಾಗಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಶಶಿಕಲಾ ಮ್ಯಾಜಿಲ್ ವರ್ಕ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Comments are closed.