ಕೊರೋನಾ ಎರಡನೇ ಅಲೆಯಿಂದ ದೇಶದ ಬಹುತೇಕ ನಗರಗಳಲ್ಲಿ ಲಾಕ್ ಡೌನ್ ಜಾರಿಯಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಸಮರ ಸಾರುತ್ತಲೇ ಇದ್ದಾರೆ. ಇದೀಗ ಬಾಲಿವುಡ್ ನಟಿಯೊಬ್ಬರು ಕೊರೋನಾ ನಿಯಮ ಉಲ್ಲಂಘಿಸಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

ಮುಂಬೈನಲ್ಲಿ ಕೊರೋನಾ ನಿಯಮ ಉಲ್ಲಂಘಿಸಿ ಜಾಲಿ ರೈಡ್ ಮಾಡುತ್ತಿದ್ದ ಕಾರಣಕ್ಕೆ ಬಾಲಿವುಡ್ ನಟಿ ದಿಶಾ ಪಟಾನಿ ಹಾಗೂ ನಟ ಟೈಗರ್ ಶ್ರಾಫ್ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊರೋನಾ ಲಾಕ್ ಡೌನ್ ಜಾರಿಯಾಗಿದ್ದಾಗಲೂ ಈ ಜೋಡಿ ತಮ್ಮ ಕಾರಿಯಲ್ಲಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಜಾಲಿ ರೈಡ್ ಹೋಗಿದ್ದು, ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.

ದಿಶಾ ಪಟಾನಿ ಹಾಗೂ ಟೈಗರ್ ಶ್ರಾಫ್ ವಿರುದ್ಧ ಐಪಿಸಿ ಸೆಕ್ಷನ್ 188 ಸಾರ್ವಜನಿಕ ಆದೇಶಕ್ಕೆ ಅಸಹಕಾರ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಜಿಮ್ ಗೆ ಹೋಗಿದ್ದೇವು ಎಂದು ಹೇಳಿಕೊಂಡ ಈ ಜೋಡಿ ಬಾಂದ್ರಾದ ರಸ್ತೆಯಲ್ಲಿ ಸುತ್ತಾಟ ನಡೆಸಿತ್ತು ಎನ್ನಲಾಗಿದೆ. ಈ ವೇಳೆ ಪ್ರಶ್ನಿಸಿದ ಪೊಲೀಸರು ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆ ಪರಿಶೀಲಿಸಿ ಬಿಟ್ಟು ಕಳುಹಿಸಿದ್ದರು.

ಆದರೆ ಈ ಜೋಡಿ ಮನೆ ಸೇರದೇ ಮತ್ತೆ ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದದ್ದು ಪೊಲೀಸರ ಗಮನಕ್ಕೆ ಬಂದಿದೆ. ಹೀಗಾಗಿ ಪೊಲೀಸರು ದಿಶಾ ಹಾಗೂ ಟೈಗರ್ ಶ್ರಾಫ್ ವಿರುದ್ಧ ಎಫ್.ಆಯ್.ಆರ್ ದಾಖಲಿಸಿದ್ದಾರೆ. ಬಾಲಿವುಡ್ ನ ಈ ಯುವಜೋಡಿ ಕೆಲಸಮಯದಿಂದ ಡೇಟಿಂಗ್ ನಡೆಸುತ್ತಿರುವುದಾಗಿ ಹೇಳಿಕೊಂಡಿದೆ.