ಬೆಂಗಳೂರು : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೂ ಬೆಂಗಳೂರಿಗೂ ಲಿಂಕ್ ಇರುವ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಡ್ರಗ್ಸ್ ದಂಧೆಯಲ್ಲಿ ಕಾರ್ಪೋರೇಟರ್ ಮಗನ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಎನ್ ಸಿಬಿ ಅಧಿಕಾರಿಗಳು ಬೆಂಗಳೂರಿನ ಕಾರ್ಪೋರೇಟರ್ ಮನೆಯ ಮೇಲೆ ದಾಳಿ ನಡೆಸಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಮುಂಬೈನಲ್ಲಿ ನಡೆದಿದ್ದ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿಗೂ ಡ್ರಗ್ಸ್ ಪೆಡ್ಲರ್ ಗಳಿಗೂ ಲಿಂಕ್ ಇರುವುದು ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಡ್ರಗ್ಸ್ ದಂಧೆಯ ಜಾರು ಹಿಡಿದಿರುವ ಎನ್ ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಿಬಿಎಂಪಿ ಕಾರ್ಪೋರೇಟರ್ ಕೇಶವಮೂರ್ತಿ ಅವರ ಪುತ್ರ ಯಶಸ್ ಮನೆಯ ಮೇಲೆ ದಾಳಿ ನಡೆಸಿ ನಾಳೆಯೇ ಮುಂಬೈನಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಿದೆ.

ಕಾರ್ಪೋರೇಟರ್ ಕೇಶವಮೂರ್ತಿ ಅವರ ಪುತ್ರ ಯಶಸ್ ಡ್ರಗ್ ಪೆಡ್ಲರ್ ರೆಹಮಾನ್ ಜೊತೆಗೆ ನೇರ ಸಂಪರ್ಕವನ್ನು ಹೊಂದಿದ್ದ. ಮುಂಬೈನಿಂದ ಯಶಸ್ ಡ್ರಗ್ಸ್ ತರಿಸಿಕೊಂಡು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಡ್ರಗ್ಸ್ ಪೆಡ್ಲರ್ ರೆಹಮಾನ್ ಗೂ ರಿಯಾ ಚಕ್ರವರ್ತಿ ಸಹೋದರ ಸೋವಿಕ್ ಹಾಗೂ ಮಿರಾಂದಾ ಜೊತೆಗೂ ನೇರ ಸಂಪರ್ಕವನ್ನು ಹೊಂದಿದ್ದ. ಹೀಗಾಗಿ ಸುಶಾಂತ್ ಸಿಂಗ್ ಸಾವಿನಲ್ಲಿ ಯಶಸ್ ಪಾತ್ರವಿದೆಯಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ. ಯಶಸ್ ಪದವಿ ಪಡೆದ ನಂತರದಲ್ಲಿ ಬೆಂಗಳೂರಿನಲ್ಲಿ ಕಾಂಟ್ರಾಕ್ಟ್ ಕೆಲಸದ ಜೊತೆಗೆ ಜಿಮ್ ಕೂಡ ನಡೆಸುತ್ತಿದ್ದ ಎನ್ನಲಾಗಿದೆ.

ಎನ್ ಸಿಬಿ ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸುತ್ತಿದ್ದಂತೆಯೇ ಯಶಸ್ ಪರಾರಿಯಾಗಿದ್ದಾನೆ. ಹೀಗಾಗಿ ಎನ್ ಸಿಬಿ ಅಧಿಕಾರಿಗಳು ಯಶಸ್ ಜೊತೆಗೆ ಸಂಪರ್ಕದಲ್ಲಿರುವ ಸ್ನೇಹಿತರಿಗಾಗಿ ಬಲೆ ಬೀಸಿದ್ದಾರೆ.