ಕೊರೊನಾ ಸೋಂಕಿತ ಯುವತಿಯ ಮೇಲೆ ಅತ್ಯಾಚಾರ : ಆಸ್ಪತ್ರೆಗೆ ಸಾಗಿಸುವಾಗ ಅಂಬ್ಯುಲೆನ್ಸ್ ಚಾಲಕನಿಂದ ನೀಚ ಕೃತ್ಯ

0

ತಿರುವನಂತಪುರ : ಕೊರೊನಾ ಸೋಂಕಿತ ಯುವತಿಯೋರ್ವಳನ್ನು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಅಂಬ್ಯುಲೆನ್ಸ್ ಚಾಲಕನೇ ಅತ್ಯಾಚಾರೆಸಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಕೊರೊನಾ ಸೋಂಕಿತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದ ಪಥನಮತ್ತಟ್ಟದ ಅರಣ್ಮುಲಾದಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ಚಾಲಕ ನೌಫಾಲ್ ಎಂಬಾತನಿಂದ ಈ ದುಷ್ಕೃತ್ಯ ನಡೆದಿದೆ. ಕೊರೊನಾ ವೈರಸ್ ಸೋಂಕಿತ ಯುವತಿಯನ್ನು ಕರೆತರುವಂತೆ 108 ಅಂಬ್ಯುಲೆನ್ಸ್ ಚಾಲಕನಿಗೆ ಸೂಚನೆಯನ್ನು ನೀಡಲಾಗಿತ್ತು. ಓರ್ವ ಯುವತಿಯನ್ನು ಸಮೀಪದ ಆಸ್ಪತ್ರೆಗೆ ಡ್ರಾಫ್ ಮಾಡಿದ್ದ. ಆದರೆ 19 ವರ್ಷದ ಇನ್ನೋರ್ವ ಯುವತಿಗೆ ಕೊರೊನಾ ಸೋಂಕು ತೀವ್ರವಾಗಿತ್ತು. ಹೀಗಾಗಿ ಯುವತಿಯನ್ನು ಬೇರೊಂದು ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿತ್ತು.

ಚಾಲಕ ಯುವತಿಯನ್ನು ಅಂಬ್ಯುಲೆನ್ಸ್ ನಲ್ಲಿ ಕೂರಿಸಿಕೊಂಡು ನಿರ್ಜನ ಸ್ಥಳಕ್ಕೆ ಕರೆತಂದು ಅತ್ಯಾಚಾರವೆಸಗಿದ್ದಾನೆ. ನಂತರ ಯುವತಿಯನ್ನು ಪಾಂಡಲಂ ಆಸ್ಪತ್ರೆಗೆ ದಾಖಲಿಸಿ ತೆರಳಿದ್ದಾನೆ. ಆದರೆ ಯುವತಿಯ ಮೈಮೇಲೆ ಗಾಯಗಳಾಗಿದ್ದು, ಅನುಮಾನಗೊಂಡ ವೈದ್ಯರು ಯುವತಿಯ ಬಳಿಯಲ್ಲಿ ವಿಚಾರಿಸಿದ್ದಾರೆ. ಈ ವೇಳೆಯಲ್ಲಿಯುವತಿ ತನ್ನ ಮೇಲೆ ಅತ್ಯಾಚಾರವೆಸಗಿರುವುದನ್ನು ವೈದ್ಯರಿಗೆ ತಿಳಿಸಿದ್ದಾಳೆ. ಕೂಡಲೇ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.

ವಿಷಯ ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾಯಂಕುಲಂ ಮೂಲದ ನೌಫಲ್ ವಿರುದ್ದ ಕೇಸು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆಯಲ್ಲಿ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಚಾಲಕನನ್ನು ಏಜೆನ್ಸಿಯೊಂದರ ಮೂಲಕ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಏಜೆನ್ಸಿ ಚಾಲಕನ ಪೂರ್ವವಿವರಗಳನ್ನು ಪಡೆಯದೇ ಕೆಲಸಕ್ಕೆ ನೇಮಿಸಿದ್ದೇ ಘಟನೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಏಜೆನ್ಸಿಯ ವಿರುದ್ದ ಕ್ರಮಕೈಗೊಳ್ಳುತ್ತೇನೆ ಎಂದು ಆರೋಗ್ಯ ಸಚಿವ ಕೆ.ಕೆ.ಶೈಲಜಾ ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಹಿಂದೆ ಇಂತಹ ಘಟನೆ ನಡೆದಿಲ್ಲ, ಮುಂದೆಯೂ ನಡೆಯೋದಕ್ಕೆ ಬಿಡುವುದಿಲ್ಲವೆಂದ ಅವರು ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.