ನಿರುದ್ಯೋಗಿಗಳಿಗೆ 6 ಸಾವಿರ ಭತ್ಯೆ…! ಕ್ಯಾಶ್ ಲೆಸ್ ಆಸ್ಪತ್ರೆ…! ಮಸ್ಕಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಭರ್ಜರಿ ಭರವಸೆ…!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ನಡುವೆಯೇ ಉಪಚುನಾವಣೆ ಕಣ ರಂಗೇರಿದೆ. ಮಸ್ಕಿಯಲ್ಲಿ ಕಾಂಗ್ರೆಸ್-ಬಿಜೆಪಿ ನೆಕ್ ಟೂನೆಕ್  ಫೈಟ್ ನಲ್ಲಿದ್ದು, ನಮ್ಮ ಅಭ್ಯರ್ಥಿಯನ್ನು ವಿಧಾನಸೌಧಕ್ಕೆ ಕರೆದೊಯ್ಯಲು ಸಿದ್ಧ ಎಂದಿರುವ ಡಿಕೆಶಿ ನಿರುದ್ಯೋಗಿಗಳಿಗೆ 6 ಸಾವಿರ ಭತ್ಯೆ ಹಾಗೂ ಕ್ಯಾಶ್ ಲೆಸ್ ಆಸ್ಪತ್ರೆ ಭರವಸೆ ನೀಡಿದ್ದಾರೆ.

ಚುನಾವಣೆ ವೇಳೆ ಪಕ್ಷಗಳು ಪ್ರಣಾಳಿಕೆ ಬಿಡುಗಡೆಗೊಳಿಸೋದು ವಾಡಿಕೆ. ಆದರೆ ಈ ಭಾರಿ ಉಪಚುನಾವಣೆಯಲ್ಲೇ ಕಾಂಗ್ರೆಸ್ ಭರ್ಜರಿ ಪ್ರಣಾಳಿಕೆ ಜೊತೆ ಕಣಕ್ಕಿಳಿದಂತಿದ್ದು, ಮಸ್ಕಿ ಉಪಚುನಾವಣೆ ಕಣದಲ್ಲಿ ಬೀಡುಬಿಟ್ಟಿರುವ ಡಿ.ಕೆ.ಶಿವಕುಮಾರ್ ಭರ್ಜರಿ ಭಾಷಣದ ಜೊತೆ ಸಖತ್ ಭರವಸೆಗಳನ್ನು ನೀಡಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಡಿ.ಕೆ.ಶಿವಕುಮಾರ್ ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ. ಹೀಗಾಗಿ ಸ್ವತಃ ಬಿಎಸ್ವೈ ಪ್ರಚಾರಕ್ಕೆ ಬಂದಿದ್ದಾರೆ. ಜನರು ಬಿಜೆಪಿ ಆಡಳಿತದಿಂದ ಕಂಗೆಟ್ಟಿದ್ದಾರೆ. ಯುವಕರಿಗೆ ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಹೀಗಾಗಿ  ರಾಹುಲ್ ಗಾಂಧಿಯವರ ಸಲಹೆಯಂತೆ ನಾವು ನಿರುದ್ಯೋಗಿ ಯುವಕರಿಗೆ 6 ಸಾವಿರ ಭತ್ಯೆ ನೀಡುತ್ತೇವೆ.

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ. ರಾಜ್ಯದಾದ್ಯಂತ ಬಡವರಿಗಾಗಿ ಕ್ಯಾಶ್ ಲೆಸ್ ಆಸ್ಪತ್ರೆ ವ್ಯವಸ್ಥೆ ಜಾರಿಯಾಗಲಿದೆ ಎಂದು ಭಾಷಣದಲ್ಲಿ ಭರವಸೆ ನೀಡಿದ್ದಾರೆ.

ಬಿಜೆಪಿ ಹಣಬಲದಿಂದ ಚುನಾವಣೆ ಗೆಲ್ಲಲು ಮುಂದಾಗಿದೆ. ಹೀಗಾಗಿ ಹಣಹಂಚಿಕೆ ಮಾಡ್ತಿದೆ. ಆದರೆ ನಾವು ಜನಬಲದಿಂದ ಗೆದ್ದು ಬಸನಗೌಡರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗುತ್ತೇವೆ  ಎಂಬ ವಿಶ್ವಾಸವಿದೆ ಎಂದಿದ್ದಾರೆ.

ನಿಮ್ಮ ಓಟುಗಳನ್ನು ಮಾರಿಕೊಂಡ ಪ್ರತಾಪ್ ಗೌಡ ಪಾಟೀಲ್ ಗೆ ಬುದ್ಧಿಕಲಿಸಲು ನಿಮಗೆ ಈ ಚುನಾವಣೆ ಅವಕಾಶ ನೀಡಿದೆ. 50 ಕೋಟಿಗೆ ಮತಗಳನ್ನು ಮಾರಿದ್ದಾರೆ. ಈಗ  ಆ ಹಣವನ್ನು ಖಾಲಿಮಾಡಿಸುವ ಸಮಯ ಬಂದಿದೆ ಎಂದು ಡಿಕೆಶಿ ಪ್ರತಾಪ್ ಗೌಡ ಪಾಟೀಲ್ ಗೆ ಟಾಂಗ್ ನೀಡಿದ್ದಾರೆ.

Comments are closed.