ಕೋಟಿ- ಚೆನ್ನಯ್ಯ, ಬಿಲ್ಲವರ ಬಗ್ಗೆ ಅವಹೇಳನಕಾರಿ ಹೇಳಿಕೆ : ಬಿಜೆಪಿ ಮುಖಂಡನ ವಿರುದ್ದ ಪ್ರಕರಣ ದಾಖಲು

ಮಂಗಳೂರು : ಬಿಲ್ಲವ ಸಮುದಾಯ ಹಾಗೂ ಕೋಟಿ -ಚೆನ್ನಯ್ಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ವಿರುದ್ದ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಜಗದೀಶ್ ಅಧಿಕಾರಿ ಅವರು, ಬಿಲ್ಲವ ಸಮದಾಯದ ಜನಾರ್ಧನ ಪೂಜಾರಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಅಲ್ಲದೇ ಕೋಟಿ -ಚೆನ್ನಯ್ಯ ಅವರನ್ನು ಬೇರೆಯ ರೀತಿಯಲ್ಲಿ ಬಿಂಬಿಸಿದ್ದಾರೆನ್ನುವ ಆರೋಪ ಜಗದೀಶ್ ಅಧಿಕಾರಿ ಅವರ ವಿರುದ್ದ ಕೇಳಿಬಂದಿತ್ತು. ಈ ನಡುವಲ್ಲೇ ಬಿಲ್ಲವ ಮುಖಂಡರು ಜಗದೀಶ್ ಅಧಿಕಾರಿ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಇನ್ನು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರು ಜಗದೀಶ್ ಅಧಿಕಾರಿಯವರ ಮುಖಕ್ಕೆ ಮಸಿಬಳಿಯುವವರಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದರು. ಅಲ್ಲದೇ 3 ದಿನಗಳಲ್ಲಿ ಅಧಿಕಾರಿ ಕ್ಷಮೆಯನ್ನು ಯಾಚಿಸಬೇಕು ಎಂದಿದ್ದರು. ಇನ್ನು ಬಿಲ್ಲವ ಸಮುದಾಯಕ್ಕೆ ಅವಹೇಳನಕಾರಿ ಹೇಳಿಕೆ ನೀಡಿರುವ ಜಗದೀಶ್ ಅಧಿಕಾರಿ ಅವರನ್ನು ಕೂಡಲೇ ಬಿಜೆಪಿಯಿಂದ ಉಚ್ಚಾಟಿಸಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಲ್ಲವರು ಏನು ಮಾಡಬೇಕೆಂದು ಯೋಚಿಸಬೇಕಾಗುತ್ತದೆ ಎಂದು ಹೇಳಿದ್ದರು.

ಈ ನಡುವಲ್ಲೇ ಜಗದೀಶ್ ಅಧಿಕಾರಿ ಅವರ ಹೇಳಿಕೆಯ ಬೆನ್ನಲ್ಲೇ ಮೂಡಬಿದ್ರೆಯ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದವರು ಪೊಲೀಸರಿಗೆ ದೂರು ನೀಡಿದ್ದು, ಐಪಿಸಿ ಸೆಕ್ಷನ್ 295 (ಎ) 505ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.