ಕಾಲು ಕಳೆದುಕೊಂಡರೂ ಕಡಿಮೆಯಾಗಲಿಲ್ಲ ಪ್ರೀತಿ…! ಕಾಫಿನಾಡಿನಲ್ಲೊಂದು ಅಮರಪ್ರೇಮಕಹಾನಿ…!!

ಅವರಿಬ್ಬರು ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ವಿಧಿಯಾಟಕ್ಕೆ ಬಲಿಯಾದ ಯುವತಿಯ ಎರಡು ಕಾಲುಗಳು ಇದ್ದಕ್ಕಿದ್ದಂತೆ ಶಕ್ತಿಕಳೆದುಕೊಂಡಿದೆ. ಹೀಗಾಗಿ ಆಕೆ ಇನ್ನು ಜೀವನಪರ್ಯಂತ ವೀಲ್ಹ್ ಚೇರ್ ನ್ನೇ ಆಶ್ರಯಿಸಿಬದುಕಬೇಕು. ಹೀಗಿದ್ದರೂ ಪ್ರೀತಿ ಸೋತಿಲ್ಲ. ಪ್ರೀತಿಸದವಳನ್ನೆ ಮದುವೆಯಾಗುವ ಮೂಲಕ ಯುವ ಮನು ಸಮಾಜಕ್ಕೆ ಮಾದರಿಯಾಗಿದ್ದಾನೆ.

ಚಿಕ್ಕಮಗಳೂರಿನ ಭಕ್ತರಹಳ್ಳಿಯ ಮನು ಹಾಗೂ ಅದೇ ಗ್ರಾಮದ ಯುವತಿ ಸ್ವಪ್ನಾ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇನ್ನೇನು ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಆರೋಗ್ಯ ಸಮಸ್ಯೆಗೆ ತುತ್ತಾದ ಸ್ವಪ್ನಾ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಾಳೆ.

ಇನ್ನು ಜೀವನ ಪೂರ್ತಿ ವೀಲ್ಹ್ ಚೇರ್ ನಲ್ಲೇ ಕಳೆಯಬೇಕು ಎಂಬುದು ಅರಿವಾಗುತ್ತಿದ್ದಂತೆ ಪ್ರೇಮಿಗೆ ಬೇರೆ ಮದುವೆ ಮಾಡಿಕೊಳ್ಳುವಂತೆ ಹೇಳಿದ್ದಾಳೆ. ಆದರೆ ಸ್ವಪ್ನಾಳನ್ನು ಮನಸಾರೆ ಪ್ರೀತಿಸಿದ್ದ ಮನು ಯಾರ ಮಾತು ಕೇಳದೇ ಆಕೆಯನ್ನು ಮದುವೆಯಾಗುವುದಾಗಿ ನಿರ್ಧರಿಸಿದ್ದಾನೆ. ಅಷ್ಟೇ ಅಲ್ಲ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಆಕೆಯನ್ನೇ ವಿವಾಹವಾಗುವ ಮೂಲಕ ಆದರ್ಶ ಮೆರೆದಿದ್ದಾನೆ.

ಸ್ವಪ್ನ ಹಾಗೂ ಮನು  ಇಬ್ಬರೂ ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಮನು ಹಾರ್ಡ್ ವೇರ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಪ್ರೇಯಸಿಗೆ ಆರೋಗ್ಯ ಸಮಸ್ಯೆ ಕಾಣಿಸುತ್ತಿದ್ದಂತೆ ಹಳ್ಳಿಗೆ ವಾಪಸ್ಸಾದ ಮನು ಹಳ್ಳಿಯಲ್ಲಿಯೇ ಉಳಿದು ಬದುಕಲು ನಿರ್ಧರಿಸಿದ್ದಾನೆ.

ಮನು ಮತ್ತು ಸ್ವಪ್ನಾರದ್ದು ಬೇರೆ ಬೇರೆ ಜಾತಿ. ಆದರೂ ಸ್ವಪ್ನಳನ್ನು ಮನು ತಾಯಿ ಸೊಸೆಯೆಂದು ಒಪ್ಪಿಕೊಂಡಿದ್ದು, ಮಗ ಇಷ್ಟಪಟ್ಟ ಮೇಲೆ ಮುಗಿತು. ಆಕೆ ಹೇಗಿದ್ದರೂ ನನ್ನ ಸೊಸೆಯೇ ಎಂದು ಮನೆತುಂಬಿಸಿಕೊಂಡಿದ್ದಾರೆ. ಇವರ ಈ ಅಮರ ಪ್ರೇಮಕ್ಕೆ ಇಡಿ ಗ್ರಾಮವೇ ಬೆರಗಾಗಿದ್ದು, ಯುವಜೋಡಿಯನ್ನು ಬೆಂಬಲಿಸಿದೆ.

ಈಗಾಗಲೇ ಸ್ವಪ್ನ ಚಿಕಿತ್ಸೆಗಾಗಿಯೂ ಸಾಕಷ್ಟು ಖರ್ಚು ಮಾಡಿರುವ ಮನು ಆಕೆಯನ್ನು ಕೇರಳ ತುದಿಯವರೆಗೂ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾನೆ. ಆರ್ಯುವೇದ್, ಇಂಗ್ಲೀಷ್ ಔಷಧಿ ಕೊಡಿಸಿದ್ದರೂ ಏನು ಪ್ರಯೋಜನವಾಗಿಲ್ಲ. ಆದರೂ ಇನ್ನು ಹೆಚ್ಚಿನ ಚಿಕಿತ್ಸೆ ಕೊಡಿಸುತ್ತೇನೆ ಎನ್ನುತ್ತಿದ್ದಾನೆ ಮನು. ಪ್ರೀತಿ-ಪ್ರೇಮವೆಲ್ಲ ಹಾಸಿಗೆಯಲ್ಲೇ ಮುಗಿದು ಹೋಗೋ ಈ ಕಾಲದಲ್ಲಿ ಮನು-ಸ್ವಪ್ನ ಪ್ರೀತಿಯ ಕತೆ ಎಲ್ಲರಿಗೂ ಸ್ಪೂರ್ತಿತರುವಂತಿದೆ.

Comments are closed.