ಚಿಕ್ಕಮಗಳೂರು : ಹಾಡುಹಗಲಲ್ಲೇ ಮನೆಗೆ ನುಗ್ಗಿದ ದರೋಡೆಕೋರರಿಬ್ಬರು ಲಕ್ಷಾಂತರ ಮೌಲ್ಯದ ಹಣ ಹಾಗೂ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗುವ ವೇಳೆಯಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಚಿಕ್ಕಮಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಹೌದು, ಚಿಕ್ಕಮಗಳೂರು ನಗರ ಎಐಟಿ ಸರ್ಕಲ್ ಬಳಿಯಲ್ಲಿರುವ ಚಿಕ್ಕಮಗಳೂರು ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರೇಗೌಡ ಎಂಬವರ ಮನೆಗೆ ನುಗ್ಗಿದ ಇಬ್ಬರು ದರೋಡೆಕೋರರು ಮನೆಯವರಿಗೆ ಚಾಕು ತೋರಿಸಿ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದರು. ಎಐಟಿ ಸರ್ಕಲ್ ಬಳಿಗೆ ಬರುತ್ತಿದ್ದಂತೆಯೇ ಸ್ಥಳೀಯರಿಗೆ ವಿಷಯ ತಿಳಿದಿದೆ. ಕೂಡಲೇ ದರೋಡೆಕೋರ ರನ್ನು ಸೆರೆ ಹಿಡಿಯಲು ಯತ್ನಿಸಿದ್ದಾರೆ. ಆದರೆ ಚಾಕು ತೋರಿಸಿ ಬೆದರಿಸುತ್ತಲೇ ದರೋಡೆಕೋರರು ಸ್ಥಳದಿಂದ ಕಾಲ್ಕೀಳಲು ಯತ್ನಿಸಿದ್ದಾರೆ.
ಈ ವೇಳೆಯಲ್ಲಿ ಸ್ಥಳೀಯರು ದರೋಡೆಕೋರರ ಮೇಲೆ ಕಲ್ಲು ತೂರಿದಿದ್ದಾರೆ. ಬೈಕಿನಲ್ಲಿ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ವೇಳೆಯಲ್ಲಿ ಅಗ್ನಿಶಾಮಕ ವಾಹನದ ಚಾಲಕ ಬೈಕಿಗೆ ವಾಹನವನ್ನು ಅಡ್ಡಗಟ್ಟಿದ್ದಾರೆ. ಚಾಕು ತೋರಿಸುತ್ತಲೇ ಬೈಕ್ ಬಿಟ್ಟು ಓಡಿ ಹೋಗುತ್ತಿದ್ದ ದರೋಡೆಕೋರರನ್ನು ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಸೆರೆ ಹಿಡಿದಿದ್ದಾರೆ.
ಘಟನೆಯ ಬೆನ್ನಲ್ಲೇ ಕಾಫಿನಾಡು ಚಿಕ್ಕಮಗಳೂರಿನ ಜನರು ಬೆಚ್ಚಿಬಿದ್ದಿದ್ದಾರೆ. ಆದರೆ ದರೋಡೆಕೋರರನ್ನು ಸೆರೆ ಹಿಡಿದಿರುವ ಸ್ಥಳೀಯರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದರೋಡೆಕೋರರನ್ನು ಬೆನ್ನಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.