ಮಂಗಳೂರು : ಕೋಟಿ – ಚೆನ್ನಯ್ಯರ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಜಗದೀಶ್ ಅವರ ವಿರುದ್ದ ಬಿಲ್ಲವ ಸಮುದಾಯ ಸೆಟೆದು ನಿಂತಿದೆ. ಇದೀಗ ಬಿಜೆಪಿ ಮುಖಂಡನ ಮುಖಕ್ಕೆ ಮಸಿ ಬಳಿಯುವವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಕೈ ನಾಯಕಿ ಪ್ರತಿಭಾ ಕುಳಾಯಿ ಆಫರ್ ಕೊಟ್ಟಿದ್ದಾರೆ.
ವಾಲ್ಪಾಡಿಗುತ್ತುವಿನಲ್ಲಿ ನಡೆದ ನೇಮೋತ್ಸವದ ಸಂದರ್ಭದಲ್ಲಿ ಜಗದೀಶ್ ಅಧಿಕಾರಿ ಅವರು ತನ್ನ ಭಾಷಣದಲ್ಲಿ ಪಟ್ಟ ಆದವರ ಕಾಲು ಹಿಡಿಯುತ್ತೇನೆ, ಆದರೆ ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎಂದು ಹೇಳಿದ್ದರು. ಈ ಆಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಕುರಿತು ಸ್ಪಷ್ಟನೆ ಕೇಳಲು ಕರೆ ಮಾಡಿದ್ದ ಬಿಲ್ಲವ ಸಮುದಾಯ ಮುಖಂಡರು ಕರೆ ಮಾಡಿದ್ದ ಸಂದರ್ಭದಲ್ಲಿ ಬಿಲ್ಲವ ಸಮುದಾಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಆಡಿಯೋ ವೈರಲ್ ಆಗಿದ್ದು, ಬಿಲ್ಲವ ಸಮುದಾಯದವರು ಜಗದೀಶ್ ಅಧಿಕಾರಿ ಅವರ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಕಾಂಗ್ರೆಸ್ ಮಾಜಿ ಕಾರ್ಪೋರೇಟರ್, ಬಿಲ್ಲವ ಸಮುದಾಯದ ನಾಯಕಿಯಾಗಿ ಗುರುತಿಸಿಕೊಂಡಿರುವ ಪ್ರತಿಭಾ ಕುಳಾಯಿ ಫೇಸ್ ಬುಕ್ ಲೈವ್ ವೇಳೆಯಲ್ಲಿ ಜಗದೀಶ್ ಅಧಿಕಾರಿ ಅವರ ಹೇಳಿಕೆಯನ್ನು ಖಂಡಿಸಿದ್ದರು. ಜನಾರ್ದನ ಪೂಜಾರಿ ಮತ್ತು ಬಿಲ್ಲವರ ಆರಾಧ್ಯ ದೈವ ಕೋಟಿ ಚೆನ್ನಯ್ಯರ ವಿರುದ್ಧ ಜಗದೀಶ್ ಅಧಿಕಾರಿ ಕೀಳಾಗಿ ಮಾತನಾಡಿದ್ದರು. ಹೀಗಾಗಿ ನಾಲ್ಕು ದಿನಗಳ ಒಳಗೆ ಗರೋಡಿಗೆ ಹೋಗಿ ಕ್ಷಮೆ ಕೇಳಬೇಕು, ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಒತ್ತಾಯಿಸಿದ್ದಾರೆ.
ಅಲ್ಲದೇ ಪ್ರಥಮವಾಗಿ ಜಗದೀಶ್ ಅಧಿಕಾರಿ ಅವರ ಮುಖಕ್ಕೆ ಮಸಿಬಳಿದವರಿಗೆ ತಾನು 1 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿಯೂ ಅವರು ಘೋಷಣೆಯನ್ನು ಮಾಡಿದ್ದಾರೆ.