ಕೊರೊನಾ ಎರಡನೇ ಅಲೆ : ರಾಜ್ಯದಲ್ಲಿ ಎರಡು ವಾರ ಸಭೆ, ಸಮಾರಂಭ ಬಂದ್

ಬೆಂಗಳೂರು : ರಾಜ್ಯದಲ್ಲಿಯೂ ಕೊರೊನಾ ಎರಡನೇ ಅಲೆಯ ಆತಂಕ ಶುರುವಾಗಿದೆ. ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಎರಡು ವಾರಗಳ ಕಾಲ ಎಲ್ಲಾ ರೀತಿಯ ಸಭೆ, ಸಮಾರಂಭಗಳನ್ನು ನಿಷೇಧಿಸುವಂತೆ ರಾಜ್ಯ ಮಟ್ಟದ ಕೋವಿಡ್ ನಿಯಂತ್ರಣ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿಯೇ ಆರೋಗ್ಯ ಸಚಿವ ಡಾ.ಡಿ.ಸುಧಾಕರ್ ಅವರು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರ ಜೊತೆ ಸಭೆ ನಡೆಸಿದ್ದಾರೆ. ಸಮಿತಿಯು ಹೊಸ ವರ್ಷಾಚರಣೆ ಸೇರಿದಂತೆ ಸಭೆ, ಸಮಾರಂಭಗಳಿಗೆ ನಿಷೇಧ ಹೇರುವಂತೆ ಶಿಫಾರಸು ಮಾಡಿದೆ. ಎಂದು ಸಚಿವ ಡಾ.ಡಿ.ಸುಧಾಕರ್ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಶಾಲೆ, ಕಾಲೇಜುಗಳನ್ನು ಆರಂಭಿಸುವ ಕುರಿತು ಡಿಸೆಂಬರ್ ಅಂತ್ಯದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ. ರಾಜ್ಯದಲ್ಲಿ ಜನವರಿ ಅಂತ್ಯ ಅಥವಾ ಫೆಬ್ರವರಿ ಆರಂಭದಲ್ಲಿ ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಈ ನಿಟ್ಟಿನಲ್ಲಿ ಡಿಸೆಂಬರ್ 20ರಿಂದ ಜನವರಿ 2ರ ವರೆಗೆ ರಾಜ್ಯದಾದ್ಯಂತ ಸಭೆ ಸಮಾರಂಭಗಳಿಗೆ 200 ಮಂದಿ, ಅಂತ್ಯಕ್ರಿಯೆಗೆ 50, ಮದುವೆಗೆ 100 ಹಾಗೂ ಧಾರ್ಮಿಕ, ರಾಜಕೀಯ ಸಭೆ ಸಮಾರಂಭಗಳಿಗೆ 200 ಮಂದಿ ಮಾತ್ರವೇ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವಂತೆಯೂ ತಾಂತ್ರಿಕ ಸಮಿತಿ ಶಿಫಾರಸು ಮಾಡಿದೆ. ತಾಂತ್ರಿಕ ಸಮಿತಿಯ ಶಿಫಾರಸಿನ ಅನುಷ್ಟಾನದ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.

Comments are closed.