ಮುಂಬೈ: ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆಗಸ್ಟ್ 31ರ ಇಎಂಐ ಪಾವತಿಗೆ ವಿನಾಯಿತಿ ನೀಡಿತ್ತು. ಆದ್ರೀಗ ಇಎಂಐ ಪಾವತಿ ಅವಧಿಯನ್ನು ಮತ್ತೆ ವಿಸ್ತರಿಸುವ ಸಾಧ್ಯತೆ ಕಡಿಮೆ ಎನ್ನುತ್ತಿದೆ ಆರ್ ಬಿಐ ಮೂಲಗಳು. ಹೀಗಾಗಿ ಸಾಲಗಾರರೀಗ ಟೆನ್ಶನ್ ಶುರುವಾಗಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಣಕಾಸಿನ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡಲು ಆರ್ ಬಿಐ 2020 ರ ಮಾರ್ಚ್ 1 ರಿಂದ ಆರು ತಿಂಗಳವರೆಗೆ ಸಾಲ ಮರುಪಾವತಿಸುವ ಅವಧಿ ವಿಸ್ತರಿಸಿತ್ತು. ನಂತರ ಲಾಕ್ ಡೌನ್ ಅವಧಿ ವಿಸ್ತರಣೆಯಾಗುತ್ತಿದ್ದಂತೆಯೇ ಇಎಂಐ ಪಾವತಿಯ ಅವಧಿಯನ್ನು ವಿಸ್ತರಣೆ ಮಾಡಿತ್ತು.

ಇದೀಗ ಆರ್‌ಬಿಐ ನೀಡಿದ್ದ ಸಾಲ ಮರುಪಾವತಿ ರಿಲೀಫ್ (ಮೊರಟೋರಿಯಂ) ಆಗಸ್ಟ್ 31ಕ್ಕೆ ಅಂತ್ಯಗೊಳ್ಳಲಿದ್ದು, ಸಪ್ಟೆಂಬರ್ 1 ರಿಂದ ಎಂದಿನಂತೆ ಇಎಂಐ ಪಾವತಿ ಶುರುವಾಗುವ ಸಾಧ್ಯತೆ ಇದೆ.

ಕೊವಿಡ್-19 ನಿಂದ ಏಕಾಏಕಿ ಸಂಭವಿಸಿದ ಸಮಸ್ಯೆಗಳನ್ನು ಪರಿಹರಿಸದೆ ಸಾಲಗಾರರ ಇಎಂಐ ಅವಧಿಯನ್ನು ವಿಸ್ತರಣೆ ಮಾಡುವುದರಿಂದ ಆರ್ಥಿಕ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಗಸ್ಟ್ 31 ರ ನಂತರ ಬ್ಯಾಂಕ್ ಸಾಲಗಳ ಮರುಪಾವತಿಸುವ ಅವಧಿಯನ್ನು ಮತ್ತೆ ವಿಸ್ತರಿಸುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಆದರೆ ಆರ್ ಬಿಐ ಮತ್ತೊಂದು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುತ್ತೆ ಅಂತಾ ಹೇಳಲಾಗುತ್ತಿದ್ದು, ಪ್ರಧಾನಿ ಮೋದಿ ಕೂಡ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿಶೇಷ ಯೋಜನೆಗಳನ್ನು ಘೋಷಣೆ ಮಾಡುತ್ತಾರೆ ಎನ್ನಲಾಗಿತ್ತು. ಆದ್ರೀಗ ಅನ್ ಲಾಕ್ 4.0 ಮಾರ್ಗಸೂಚಿ ಪ್ರಕಟವಾಗಿದ್ದು, ಅಂತಹ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಹೀಗಾಗಿ ಸಾಲಗಾರರಿಗೆ ಇದೀಗ ಟೆನ್ಶನ್ ಶುರುವಾಗಿದೆ.