ಮದ್ಯಪ್ರಿಯರಿಗೆ ಗುಡ್ ನ್ಯೂಸ್ : ಅಧಿಕೃತ ಆದೇಶ ಹೊರಡಿಸುತ್ತೆ ರಾಜ್ಯ ಸರಕಾರ

0

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ  ಬಾಗಿಲು ಮುಚ್ಚಿದ್ದ ಬಾರ್, ಪಬ್ ಹಾಗೂ ಕ್ಲಬ್ ಗಳನ್ನು ತೆರೆಯಲು ಅಬಕಾರಿ ಇಲಾಖೆ ಮುಂದಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮ್ಮತಿ ಸೂಚಿಸಿದ್ದು, ಈ ಕುರಿತು ರಾಜ್ಯ ಸರಕಾರ ನಾಳೆ ಅಧಿಕೃತ ಆದೇಶ ಹೊರಡಿಸಲಿದೆ.

ರಾಜ್ಯದಲ್ಲಿ ಕಳೆದೈದು ತಿಂಗಳಿನಿಂದಲೂ ಕೊರೊನಾ ವೈರಸ್ ಸೋಂಕು ಹರಡುವಿಕೆಯ ಭೀತಿಯಿಂದಾಗಿ ಬಾರ್, ಕ್ಲಬ್ ಹಾಗೂ ಪಬ್ ಗಳಿಗೆ ಬೀಗ ಜಡಿಯಲಾಗಿತ್ತು. ತದನಂತರದಲ್ಲಿ ಮದ್ಯ ಮಾರಾಟಕ್ಕೆ ಅವಕಾಶವನ್ನು ಕಲ್ಪಿಸಲಾಗಿದ್ದರೂ ಕೂಡ ಬಾರ್ ಆಂಡ್ ರೆಸ್ಟೋರೆಂಟ್ ಗಳಲ್ಲಿ ಗ್ರಾಹರಿಗೆ ಪ್ರವೇಶಾವಕಾಶಕ್ಕೆ ನಿರ್ಬಂಧ ಹೇರಲಾಗಿತ್ತು.

ಇದೀಗ ಕೇಂದ್ರ ಸರಕಾರ ಅನ್ ಲಾಕ್ 4.0 ಮಾರ್ಗಸೂಚಿಯನ್ನು ಪ್ರಕಟಿಸುತ್ತಿದ್ದಂತೆಯೇ ಬಾರ್, ಪಬ್ ಹಾಗೂ ಕ್ಲಬ್ ಗಳ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ಪರವಾನಗಿ ಪಡೆದ ಬಾರ್ ಆಂಡ್ ರೆಸ್ಟೋರೆಂಟ್ ಗಳಲ್ಲಿ ಮದ್ಯ ಮಾರಾಟ ಮಾಡಲು ಮತ್ತೆ ಸಿಟ್ಟಿಂಗ್ ವ್ಯವಸ್ಥೆಗೆ ಅನುಮತಿ ನೀಡುವ ಸಾಧ್ಯತೆಯಿದೆ. ಅಬಕಾರಿ ಇಲಾಖೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಸಿಎಂ ಯಡಿಯೂರಪ್ಪ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

ಮದ್ಯ ಮಾರಾಟಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಿದ್ದರೂ ಕೂಡ ಕಠಿಣ ಮಾರ್ಗಸೂಚಿಯನ್ನು ಹೊರಡಿಸುವ ಸಾಧ್ಯತೆಯಿದೆ. ಟೇಬಲ್ ಗಳಲ್ಲಿ ಕುಳಿತುಕೊಳ್ಳಲು ಸದಸ್ಯರ ಸಂಖ್ಯೆಯನ್ನು ನಿಗದಿಗೊಳಿಸುವುದು, ಮದ್ಯ ಪೂರೈಕೆ ಮಾಡುವ ಸಿಬ್ಬಂದಿಗಳು ಕೈಗೊಳ್ಳುವ ಮುನ್ನೆಚ್ಚರಿಕೆ, ಗ್ರಾಹಕರು ಕೊರೊನಾ ಸೋಂಕು ಹರಡದಂತೆ ಪಾಲಿಸಬೇಕಾದ ನಿಯಮಗಳನ್ನು ಕಠಿಣಗೊಳಿಸುವ ಸಾಧ್ಯತೆಯಿದೆ.

ಕೇಂದ್ರ ಸರಕಾರದ ಮಾರಗಸೂಚಿಯಂತೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸ್ ಬಳಕೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಅಲ್ಲದೇ ಶೇ.50ರಷ್ಟು ಸಿಬ್ಬಂದಿಗಳು ಮಾತ್ರವೇ ಕಾರ್ಯನಿರ್ವಹಿಸುವುದು ಹಾಗೂ ಶೇ.50ರಷ್ಟು ಗ್ರಾಹಕರಿಗೆ ಮಾತ್ರವೇ ಬಾರ್ ಗಳಲ್ಲಿ ಅವಕಾಶವನ್ನು ಕಲ್ಪಿಸುವ ಸಾಧ್ಯತೆಯಿದೆ.

ಅಬಕಾರಿ ಇಲಾಖೆಯ ಸಚಿವ ನಾಗೇಶ್ ಅವರು ಈಗಾಗಲೇ ಬಾರ್, ಪಬ್ ಹಾಗೂ ಕ್ಲಬ್ ತೆರೆಯುವ ಸುಳಿವು ನೀಡಿದ್ದು, ನಾಳೆ ಸರಕಾರ ಅಧಿಕೃತ ಆದೇಶ ಹೊರಡಿಸುವ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಖುಷಿಯಾಗಿದ್ದಾರೆ.

Leave A Reply

Your email address will not be published.