ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನೂತನ 11 ಉತ್ಪನ್ನಗಳು ಲೋಕಾರ್ಪಣೆ

ಬೆಂಗಳೂರು :‌ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನೂತನ 11 ಉತ್ಪನ್ನಗಳ ಲೋಕಾರ್ಪಣೆ ಕಾರ್ಯಕ್ರಮವು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ನಟ ರಮೇಶ್ ಅರವಿಂದ್, ನಟಿ ತಾರಾ ಅನುರಾಧ, ಶಾಸಕ ಹರೀಶ್ ಪೂಂಜಾ ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಹೊರ ತಂದಿರುವ 11 ಬಗೆಯ ಸಿರಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.

ಸಿರಿ ಸಂಸ್ಥೆ 13 ಸ್ವಂತ ಮಳಿಗೆ ಹಾಗೂ 300 ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಹೊಂದಿದೆ. 2 ಸಾವಿರ ಹಳ್ಳಿಯ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಧರ್ಮಸ್ಥಳದ ಸಿರಿ ಸಂಸ್ಥೆ ಪ್ಯಾಕೇಟ್ ಮಾಡಿ, ಮಾರುಕಟ್ಟೆಗೆ ಒದಗಿಸುತ್ತಿದೆ. ರಾಜ್ಯದ ಯಾವುದೇ ಹಳ್ಳಿಯ ಮಹಿಳೆಯರು ಉತ್ಪನ್ನಗಳನ್ನು ತಯಾರಿಸಿ ನೀಡಿದರೆ ಸಿರಿ ಸಂಸ್ಥೆ ಮಾರುಕಟ್ಟೆ ಒದಗಿಸಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ತಿಳಿಸಿದರು.

ನಟ ರಮೇಶ್ ಅರವಿಂದ್ ಮಾತನಾಡಿ, ಬ್ರಾಂಡ್, ಬ್ರಾಂಡ್ ವಾಲ್ಯೂ ಹಾಗೂ ಅದರ ಉದ್ದೇಶ, ತಿಳಿದು ಸಿರಿಯ ಉತ್ಪನ್ನವನ್ನು ಕೊಳ್ಳಬೇಕು. ಇದರಿಂದ ಹಳ್ಳಿಯ ಕುಟುಂಬ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯೆ ಹಾಗೂ ಹಿರಿಯ ‌ನಟಿ ತಾರಾ ಅನುರಾಧ ಮಾತನಾಡಿ, ಸಿರಿ ಸಂಸ್ಥೆ ಸ್ತ್ರೀ ಕಲ್ಯಾಣಕ್ಕಾಗಿ ಇದೆ. ಮಹಿಳೆಯರಿಗೆ ಆರ್ಥಿಕವಾಗಿ, ಸ್ವಾಭಿಮಾನಕ್ಕಾಗಿ ಇರುವ ಸಂಸ್ಥೆ. ಗ್ರಾಮೋದ್ಯೋಗ, ಕರಕುಶಲ ಗಾಂಧೀಜಿಯವರ ಕನಸು, ಪ್ರಧಾನಿಯವರ ಆತ್ಮ ನಿರ್ಭರ ಭಾರತ ಇವೆಲ್ಲವನ್ನು ರಾಜ್ಯದಲ್ಲಿ ಜಾರಿಗೆ ತಂದವರು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಎಂದರು.

ಸಿರಿ‌ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಿರಿ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟ, ಕಡಿಮೆ ಬೆಲೆಯಲ್ಲಿ ರಾಜ್ಯಾದ್ಯಂತ ಲಭ್ಯವಿದೆ‌. ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ 2004 ರಲ್ಲಿ 20 ಲಕ್ಷ ರೂ. ಬಂಡವಾಳದೊಂದಿಗೆ, ಎರಡು ಸಾವಿರ ಮಹಿಳೆಯರು ಆರಂಭಿಸಿದ ಈ ಸಂಸ್ಥೆ ಈಗ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದೆ. ಸಿರಿ ಸಂಸ್ಥೆ 295 ಹಳ್ಳಿ ಕೇಂದ್ರಗಳಲ್ಲಿ ಉತ್ಪಾದನಾ ಕೇಂದ್ರ ಆರಂಭಿಸಿದೆ ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಸಿರಿ ಗ್ರಾಮೋದ್ಯೋಗ ಸಂಸ್ಥೆ ಟ್ರಸ್ಟಿಗಳಾದ ಶ್ರದ್ಧಾ ಅಮಿತ್, ರಾಮಸ್ವಾಮಿ, ಅರೇಕಾ ಟೀ ಸಂಸ್ಥೆಯ ಸ್ಥಾಪಕ ನಿವೇದನ್ ನೆಂಪೆ, ಕುಸುಮ ದೇವಾಡಿಗ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಿರಿ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ್, ವಿನ್ಸೆಂಟ್ ಲೋಬೋ ಹಾಗೂ ಸುಧಾಕರ್ ಸಹಕರಿಸಿದರು.

Comments are closed.