ಧಾರವಾಡ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕನಾಗಿ ಬೆಳೆಯೋ ಮಾಜಿ ಸಚಿವ ವಿನಯ್ ಕುಲಕರ್ಣಿ ಕನಸು ಕನಸಾಗೇ ಉಳಿಯುವ ಲಕ್ಷಣ ದಟ್ಟವಾಗಿದ್ದು ಜೈಲಿನ ಕೋಣೆಯೇ ಫಿಕ್ಸ್ ಎಂಬಂತೆ ಮತ್ತೊಮ್ಮೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದೆ.

ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಗೆ ನ್ಯಾಯಾಲಯ ಮತ್ತೊಮ್ಮೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದ್ದು, ಡಿ.೨೮ ರವರೆಗೆ ಜೈಲುವಾಸ ಮುಂದುವರೆಯಲಿದೆ.

ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯ ವಿನಯ್ ಕುಲಕರ್ಣಿ ಗೆ ಮತ್ತೊಮ್ಮೆ ಜೈಲಿನ ದಾರಿ ತೋರಿಸಿದ್ದು, ವಿನಯ್ ಕುಲಕರ್ಣಿ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದು, ಜಾಮೀನು ಅರ್ಜಿ ನಾಳೆ ವಿಚಾರಣೆಗೆ ಬರಲಿದೆ.

2016 ರಲ್ಲಿ ನಡೆದ ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ.ವಿನಯ್ ಕುಲಕರ್ಣಿ ತಮ್ಮ ರಾಜಕೀಯ ಭವಿಷ್ಯವನ್ನು ಕಾಪಾಡಿಕೊಳ್ಳಲು ಹಾಗೂ ಎದುರಾಳಿಯನ್ನು ಮುಗಿಸಲು ಸಂಚು ರೂಪಿಸಿ ಸುಫಾರಿ ನೀಡಿ ಕೊಲೆಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣದ ತನಿಖೆ ಮುಕ್ತಾಯಗೊಂಡಿತ್ತಾದರೂ ಯೋಗೇಶ್ ಗೌಡ ಕುಟುಂಬಸ್ಥರು ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿತ್ತು.ಪ್ರಕರಣದ ತನಿಖೆ ಕೈಗೊಂಡ ಸಿಬಿಐ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಇನ್ಸ್ಪೆಕ್ಟರ್ ,ಮಾಜಿ ಸಚಿವವಿನಯ್ ಕುಲಕರ್ಣಿ ಸೇರಿದಂತೆ ಹಲವರನ್ನು ಬಂಧಿಸಿ ತ್ತು.

ಸಿಬಿಐನಿಂದ ವಿನಯ್ ಕುಲಕರ್ಣಿ ಬಂಧನಕ್ಕೊಳಗಾಗುತ್ತಿದ್ದಂತೆ ಕಾಂಗ್ರೆಸ್ ಇದು ರಾಜಕೀಯ ಪ್ರೇರಿತ ತನಿಖೆ ಎಂದು ಆರೋಪಿಸಿತ್ತು. ಅಷ್ಟೇ ಅಲ್ಲ ಕೊಲೆ ಆರೋಪ ಎದುರಿಸುತ್ತಿರುವ ವಿನಯ್ ಕುಲಕರ್ಣಿ ನಿವಾಸಕ್ಕೆ ತೆರಳಿದ್ದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಾಂತ್ವನ ಹೇಳಿದ್ದರು.

ಮೂಲಗಳ ಮಾಹಿತಿ ಪ್ರಕಾರ ವಿನಯ್ ಕುಲಕರ್ಣಿ ಹಾಗೂ ಬಂಧಿತರ ವಿರುದ್ಧ ಸಿಬಿಐ ಸಾಕಷ್ಟು ಸಾಕ್ಷಿ ಸಂಗ್ರಹಿಸಿದ್ದು, ಜಾಮೀನು ಸಿಗೋದು ಅನುಮಾನ ಎನ್ನಲಾಗುತ್ತಿದೆ.

ಹೀಗಾಗಿ ಕಾಂಗ್ರೆಸ್ ನಲ್ಲಿ ಉಜ್ವಲ ಭವಿಷ್ಯ ನೀರಿಕ್ಷಿಸುತ್ತಿದ್ದ ವಿನಯ್ ಕುಲಕರ್ಣಿ ಜೈಲಿನಲ್ಲೇ ಫಿಕ್ಸ್ ಎನ್ನುವ ಸ್ಥಿತಿ ಎದುರಾಗಿದೆ. ಕೊಲೆ ಎಸಗಿದ ಬಳಿಕ ಬೇರೊಂದು ತಂಡಕ್ಕೆ ಕೊಲೆ ಆರೋಪ ಹೊತ್ತು ಜೈಲಿಗೆ ಹೋಗಲು ಹಣ ನೀಡಿ ಒಪ್ಪಿಸಲಾಗಿತ್ತು ಎಂಬ ಮಾತು ಕೂಡ ಕೇಳಿಬಂದಿದೆ.

ಒಂದೊಮ್ಮೆ ವಿನಯ್ ಕುಲಕರ್ಣಿ ಆರೋಪ ಸಾಬೀತಾದರೇ ಕಾಂಗ್ರೆಸ್ ಸಾಕಷ್ಟು ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಇದ್ದು, ಅನಿವಾರ್ಯವಾಗಿ ವಿನಯ್ ಕುಲಕರ್ಣಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ.ಹೀಗಾಗಿ ವಿನಯ್ ಕುಲಕರ್ಣಿ ಲೆಕ್ಕಾಚಾರಗಳು ಸಧ್ಯ ಉಲ್ಟಾ ಆದಂತಿದ್ದು ಕೊಲೆ ಪ್ರಕರಣ ಅವರ ಕನಸುಗಳಿಗೆ ಮುಳುವಾಗುವ ಲಕ್ಷಣ ದಟ್ಟವಾಗಿದೆ.