ಕೊನೆಗೂ ಫೈನಲ್ ಆಯ್ತು ಪೊಗರು ರಿಲೀಸ್ ಡೇಟ್…! ಅಭಿಮಾನಿಗಳಿಗೆ ಧ್ರುವ್ ಸರ್ಜಾ ವಿಶೇಷ ಮನವಿ…!

ಕೊರೋನಾ ಎಫೆಕ್ಟ್ ನಿಂದ ನಿಧಾನಕ್ಕೆ ಚೇತರಿಸಿಕೊಳ್ತಿರೋ ಚಂದನವನದಲ್ಲಿ ಬಿಗ್ ಸ್ಟಾರ್ ಗಳ ಸಿನಿಮಾ ರಿಲೀಸ್ ಡೇಟ್ ಅನೌನ್ಸ ಮೆಂಟ್ ಶುರುವಾಗಿದೆ. ಎಲ್ಲರಿಗಿಂತ ಮೊದಲು ಧೈರ್ಯ ತೋರಿದ ಯುವರತ್ನ ತಂಡ ಏಪ್ರಿಲ್ನಲ್ಲಿ ಚಿತ್ರ ಬಿಡುಗಡೆ ಮಾಡ್ತಿರೋದಾಗಿ ಘೋಷಣೆ ಮಾಡ್ತಿದ್ದಂತೆ ಸಾಲು ಸಾಲಾಗಿ ಇತರ ಚಿತ್ರಗಳು ತೆರೆಗೆ ಬರೋ ಸಿದ್ಧತೆ ನಡೆದಿದ್ದು, ಈಗ ಈ ಸಾಲಿಗೆ ಪೊಗರು ಕೂಡ ಹೊಸ ಸೇರ್ಪಡೆ.

ಸೋಷಿಯಲ್ ಮೀಡಿಯಾದಲ್ಲಿ ಪೊಗರು ರಿಲೀಸ್ ಡೇಟ್ ಅನೌನ್ಸ್ ಮಾಡಿರೋ ಆಕ್ಷ್ಯನ್ ಪ್ರಿನ್ಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಫೆ. 19 ರಂದು ರಾಜ್ಯದಾದ್ಯಂತ ಪೊಗರು ಸಿನಿಮಾ ತೆರೆಕಾಣಲಿದೆ. ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿರೋ ಧ್ರುವ್ ಸರ್ಜಾ ಅದರೊಂದಿಗೆ ಅಭಿಮಾನಿಗಳಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.

ಎಲ್ಲರೂ ದಯವಿಟ್ಟು ಸಿನಿಮಾವನ್ನು ಥಿಯೇಟರ್ ಗೆ ಹೋಗಿ ನೋಡಿ ಎಂದು ಧ್ರುವ್ ಸರ್ಜಾ ಅಭಿಮಾನಿಗಳಲ್ಲಿ ಕೋರಿದ್ದಾರೆ. ಈಗಾಗಲೇ ರಾಜ್ಯದಾದ್ಯಂತ ಥಿಯೇಟರ್ ಗಳು ಕಾರ್ಯಾರಂಭ ಮಾಡಿದ್ದು ಶೇಕಡಾ 50 ರಷ್ಟು ಜನರಿಗೆ ಪ್ರವೇಶಾವಕಾಶ ನೀಡಲಾಗಿದೆ. ಹೀಗಾಗಿ ಥಿಯೇಟರ್ ಗೆ ಹೋಗಿ ಎಂದು ಧ್ರುವ್ ಸರ್ಜಾ ಮನವಿ ಮಾಡಿದ್ದಾರೆ.

ಕೊರೋನಾ ಸಂಕಷ್ಟದಿಂದ ಬಹುತೇಕ 10 ತಿಂಗಳ ಕಾಲ ಥಿಯೇಟರ್ ಗಳು ಬಾಗಿಲು ಮುಚ್ಚಿದ್ದವು. ಹೀಗಾಗಿ ಸಿನಿರಂಗ, ಕಲಾವಿದರು, ತಂತ್ರಜ್ಞರು, ವಿತರಕರು ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಪ್ರೇಕ್ಷಕರು ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿದರೇ ಸಿನಿರಂಗದ ಕಷ್ಟ ಕಳೆಯುತ್ತೆ ಅನ್ನೋ ಕಾರಣಕ್ಕೆ ಧ್ರುವ್ ಸರ್ಜಾ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಅಣ್ಣನ ಸಾವಿನಿಂದ ಕಂಗೆಟ್ಟ ಧ್ರುವ್ ಸರ್ಜಾ ಚೇತರಿಸಿಕೊಂಡ ಬಳಿಕ ಪೊಗರು ಸಿನಿಮಾ ಶೂಟಿಂಗ್ ಮುಗಿಸಿದ್ದು, ಈಗ ದುಬಾರಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಪೊಗರು ಸಿನಿಮಾದಲ್ಲಿ ಧ್ರುವ್ ಗೆ ಕೊಡಗಿನ ಕನ್ಯೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದು ಈ ಚಿತ್ರ ತಮಿಳಿನಲ್ಲೂ ತೆರೆ ಕಾಣಲಿದೆ.

Comments are closed.