ಬೆಂಗಳೂರು: ಸಾಕಷ್ಟು ಕುತೂಹಲ ಹಾಗೂ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದ್ದ ಆರ್.ಆರ್ ನಗರ ಉಪಚುನಾವಣೆಗೆ ಕಾಂಗ್ರೆಸ್ ಕೊನೆಗೂ ತನ್ನ ಅಭ್ಯರ್ಥಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ನೀರಿಕ್ಷೆಯಂತೆ ದಿ. ಐಎಎಸ್ ಅಧಿಕಾರಿ ಪತ್ನಿ ಕುಸುಮಾ ರವಿಗೆ ಟಿಕೇಟ್ ದೊರೆತಿದೆ .

ಇನ್ನು ಶಿರಾ ಕ್ಷೇತ್ರದಿಂದ ಕಾಂಗ್ರೆಸ್ ತನ್ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಎಐಸಿಸಿ ಅಂತಿಮಗೊಳಿಸಿದ್ದು, ಕುಸುಮಾ ರವಿಗೆ ಆರ್.ಆರ್.ನಗರ ಟಿಕೆಟ್ ನೀಡಿರೋದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನಲ್ಲಿ ಕಾಂಗ್ರೆಸ್ ನ ಸಚಿವರೊಬ್ಬರ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿತ್ತು. ಈ ಮಧ್ಯೆ ಪತಿ ಸಾವಿನ ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದ ಕುಸುಮಾ ಡಿ.ಕೆ.ರವಿ ಸಾವಿನ ಪ್ರಕರಣದಲ್ಲಿ ಸಂಪೂರ್ಣ ಮೌನವಹಿಸಿದ್ದರು. ಅಷ್ಟೇ ಅಲ್ಲ ಪತಿಯ ವಾರ್ಷೀಕ ಕಾರ್ಯದಲ್ಲೂ ಪಾಲ್ಗೊಳ್ಳದ ಕುಸುಮಾ ವಿದ್ಯಾಭ್ಯಾಸದ ನೆಪದಲ್ಲಿ ಅಮೇರಿಕಾಕ್ಕೆತೆರಳಿದ್ದರು. ಇತ್ತೀಚಿಗೆ ದಿಢೀರ್ ರಾಜಕೀಯಕ್ಕೆ ಧುಮುಕಿದ ಕುಸುಮಾ ಕಾಂಗ್ರೆಸ್ ಸೇರ್ಪಡೆಯಾಗಿ ಆರ್.ಆರ್.ನಗರದಿಂದ ಕಣಕ್ಕಿಳಿಯುತ್ತಿರೋದು ಡಿ.ಕೆ.ರವಿ ಕುಟುಂಬಸ್ಥರು ಹಾಗೂ ಆಪ್ತರ ಕೆಂಗಣ್ಣಿಗೆ ಗುರಿಯಾಗಿದೆ.
ನನ್ನ ಮಗನ ಹೆಸರು, ಪೋಟೋ ಬಳಸಿ ಚುನಾವಣೆಯಲ್ಲಿ ಸ್ಪರ್ಧಿಸೋಕೆ ಅಥವಾ ಓಟು ಕೇಳೋಕೆ ನಾನು ಯಾವುದೇ ಕಾರಣಕ್ಕೂ ಬಿಡೋದಿಲ್ಲ ಎಂದು ಡಿ.ಕೆ.ರವಿ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಪಕ್ಷದಲ್ಲಿ ಹಲವಾರು ವರ್ಷದಿಂದ ಸೇವೆ ಸಲ್ಲಿಸುತ್ತ ಬಂದ ಟಿಕೇಟ್ ಆಕಾಂಕ್ಷಿಗಳನ್ನು ಕಡೆಗಣಿಸಿ ಕುಸುಮಾಗೆ ಮಣೆ ಹಾಕಿರೋದಿಕ್ಕೆ ಪಕ್ಷದಲ್ಲೂ ಆಂತರಿಕ ಅಸಮಧಾನ ತಲೆದೋರಿದೆ.
ಇನ್ನು ಬಿಜೆಪಿಯಿಂದ ಮಾಜಿ ಶಾಸಕ ಮುನಿರತ್ನ ಕಣಕ್ಕಿಳಿಯೋದು ಬಹುತೇಕ ಖಚಿತವಾಗಿದ್ದು, ಒಂದೊಮ್ಮೆ ಬಿಜೆಪಿ ಟಿಕೇಟ್ ನೀಡದೇ ಇದ್ದಲ್ಲಿ ಮುನಿರತ್ನ, ಪಕ್ಷೇತರವಾಗಿ ಅಥವಾ ಜೆಡಿಎಸ್ ನಿಂದ ಕಣಕ್ಕಳಿದರೂ ಅಚ್ಚರಿ ಏನಿಲ್ಲ ಅಂತಿದ್ದಾರೆ ರಾಜಕೀಯ ವಿಶ್ಲೇಷಕರು. ಒಟ್ಟಿನಲ್ಲಿ ಆರ್.ಆರ್.ನಗರ ಚುನಾವಣೆ ಪಕ್ಕಾ ರಾಜಕೀಯ ಲೆಕ್ಕಾಚಾರದ ವೇದಿಕೆಯಾಗಿದ್ದು, ಫಲಿತಾಂಶ ಏನಾಗುತ್ತೆ ಕಾದುನೋಡಬೇಕಿದೆ.