ಬೆಂಗಳೂರು: ಎರಡು ರಾಜಕೀಯ ನಾಯಕರ ಕುಟುಂಬಗಳು ಇಂದು ಸಂಬಂಧಿಕರಾಗಿ ಬದಲಾಗಿದ್ದು, ಮಾಜಿಸಿಎಂ ಎಸ್ಎಂಕೆ ಮೊಮ್ಮಗ ಅಮರ್ಥ್ಯ ಹೆಗ್ಡೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ವಿವಾಹ ನಿಶ್ಚಿತಾರ್ಥ ಗುರುವಾರ ನಗರದ ತಾಜ್ ಹೊಟೇಲ್ ನಲ್ಲಿ ಅದ್ದೂರಿಯಾಗಿ ನಡೆದಿದೆ.

ಐಶ್ವರ್ಯಾ ಹಾಗೂ ಅಮರ್ಥ್ಯ ಹೆಗ್ಡೆ ಮದುವೆ ಫೆ.14 ರಂದು ನಿಶ್ಚಯವಾಗಿದ್ದು, ಇಂದು ಐಶ್ವರ್ಯಾ ಹಾಗೂ ಅಮರ್ಥ್ಯ ಗುರು-ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ.

ತಾಜ್ ಹೊಟೇಲ್ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಡಿಕೆಶಿ ಹಾಗೂ ಎಸ್ಎಂಕೆ ಕುಟುಂಬಸ್ಥರು, ರಾಜಕೀಯ ನಾಯಕರು, ಸಿನಿಮಾರಂಗ ಗಣ್ಯರು ಸೇರಿದಂತೆ 250 ಜನರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಸಿಎಂ ಬಿಎಸ್ವೈ, ಸಚಿವ ಆರ್.ಅಶೋಕ್, ಡಾ.ಸುಧಾಕರ್, ವಿನಯ್ ಗುರೂಜಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ತಿಳಿಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಐಶ್ವರ್ಯಾ ಮಿಂಚಿದರೇ, ಅಮರ್ಥ್ಯ ಹೆಗ್ಡೆ ತಿಳಿಗುಲಾಬಿ ಬಣ್ಣದ ಶರ್ವಾನಿ ಧರಿಸಿದ್ದರು. ವಜ್ರಖಚಿತ ಉಂಗುರ ಬದಲಾಯಿಸಿಕೊಂಡ ಈ ಯುವ ಜೋಡಿ ಫೆ.14, 2021 ರಂದು ವೈವಾಹಿಕ ಬದುಕಿಗೆ ಕಾಲಿಡಲಿದೆ.

ಕೊರೋನಾ ಹಿನ್ನೆಲೆಯಲ್ಲಿ ಕೇವಲ ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದ್ದ ಈ ನಿಶ್ಚಿತಾರ್ಥ ಸಮಾರಂಭದಲ್ಲಿ 150 ಕ್ಕೂ ಹೆಚ್ಚು ವೈರೈಟಿಯ ಭಕ್ಷ್ಯಗಳನ್ನು ಬಡಿಸಲಾಗಿತ್ತು.