ಪೊಲೀಯೋ ಡ್ರಾಪ್ ಬದಲು ಸ್ಯಾನಿಟೈಸರ್ ಕುಡಿಸಿ ಆರೋಗ್ಯ ಸಿಬ್ಬಂದಿ ಎಡವಟ್ಟು…!

ಮಹಾರಾಷ್ಟ್ರ : ಕೆಲವೊಮ್ಮೆ ಸಿಬ್ಬಂದಿಗಳ ನಿರ್ಲಕ್ಷ್ಯ ಎಂತಹ ಎಡವಟ್ಟಿಗೆ ಕಾರಣವಾಗುತ್ತೆ ಅನ್ನೋದಕ್ಕೆ ಈ ಸ್ಟೋರಿನೆ ಬೆಸ್ಟ್ ಎಕ್ಸಾಂಪಲ್. ಕಳೆದ ಭಾನುವಾರ ದೇಶದಾದ್ಯಂತ ಪಲ್ಸ್ ಪೊಲೀಯೋ ಲಸಿಕೆ ನೀಡಲಾಗಿತ್ತು. ಆದರೆ ಆರೋಗ್ಯ ಸಿಬ್ಬಂದಿಯ ಎಡವಟ್ಟಿನಿಂದಾಗಿ ಪೊಲೀಯೊ ಲಸಿಕೆಯ ಬದಲು ಮಕ್ಕಳಿಗೆ ಸ್ಯಾನಿಟೈಸರ್ ಕುಡಿಸಿರುವ ಘಟನೆ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ನಡೆದಿದೆ.

ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಕಪ್ಸಿಕೊಪ್ರಿ ಗ್ರಾಮದ ಬನ್ ಬೋರಾದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೊಲೀಯೋ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 12 ಮಕ್ಕಳಿಗೆ ಪೊಲೀಯೋ ಲಸಿಕೆಯನ್ನ ಹಾಕಲಾಗಿತ್ತು. ಆದರೆ ಪೊಲೀಯೋ ಲಸಿಕೆ ಪಡೆದ ಮಗವೊಂದು ವಾಂತಿ ಮಾಡಿಕೊಳ್ಳುವುದಕ್ಕೆ ಶುರುಮಾಡಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪಲ್ಸ್ ಪೊಲೀಯೋ ಬದಲು ಹ್ಯಾಂಡ್ ಸ್ಯಾನಿಟೈಸರ್ ಕುಡಿಸಿರೋದು ಬೆಳಕಿಗೆ ಬಂದಿದೆ.

ಕೂಡಲೇ ಯವತ್ಮಾಲ್ ಜಿಲ್ಲಾಧಿಕಾರಿ ಎಂ.ಡಿ.ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಪಲ್ಸ್ ಪೊಲೀಯೋ ವೇಳೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದ ತಪ್ಪಿತಸ್ಥ ವೈದ್ಯರ ಹಾಗೂ ಆರೋಗ್ಯ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪರಿಷದ್ ಸಿಇಓ ಶ್ರೀ ಕೃಷ್ಣ ಪಂಚಾಲ್ ಅವರು ಪೊಲೀಯೋ ಲಸಿಕೆ ನೀಡುವ ಬದಲು ಸ್ಯಾನಿಟೈಸರ್ ನೀಡಿರುವುದು ದೃಢಪಟ್ಟಿದೆ. ಅಸ್ವಸ್ಥಗೊಂಡಿರುವ 5 ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

Comments are closed.