ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ : ಏರ್ ಪೋರ್ಟ್, ಸರಕಾರಿ ಕಚೇರಿಗಳಲ್ಲಿ ಹೈ ಅಲರ್ಟ್ ಘೋಷಣೆ

ನವದೆಹಲಿ : ಇಸ್ರೇಲ್ ರಾಯಭಾರ ಕಚೇರಿ ಬಳಿ ನಡೆದಿರುವ ಸ್ಪೋಟದ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ ದೇಶದ ಏರ್ ಪೋರ್ಟ್ ಹಾಗೂ ಸರಕಾರಿ ಕಚೇರಿಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ.

ಶುಕ್ರವಾರ ಸಂಜೆಯ ವೇಳೆಯಲ್ಲಿ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಸ್ರೆಲ್ ರಾಯಭಾರ ಕಚೇರಿಯ ಬಳಿಯಲ್ಲಿ ಕಡಿಮೆ ತೀವ್ರತೆಯ ಸ್ಪೋಟ ಸಂಭವಿಸಿತ್ತು. ಸ್ಪೋಟದ ಬೆನ್ನಲ್ಲೇ ಪೊಲೀಸರು ಸ್ಥಳದಲ್ಲಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಸುಧಾರಿತ ಸ್ಫೋಟಕ ಬಳಸಿ ಸ್ಪೋಟ ನಡೆಸಿರುವ ಸಾಧ್ಯತೆಯಿದೆ. ರಾಯಭಾರ ಕಚೇರಿಯಿಂದ 40-50 ಮೀಟರ್ ದೂರದಲ್ಲಿರುವ ಜಿಂದಾಲ್ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ದೆಹಲಿ ಪೊಲೀಸರ ವಿಶೇಷ ಸೆಲ್, ಕ್ರೈಂ ಬ್ರಾಂಚ್ ನ ಅಧಿಕಾರಿಗಳು ಸೇರಿದಂತೆ ಗುಪ್ತಚರ ವಿಭಾಗದ ಹಲವು ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ, ಸ್ಫೋಟದ ತನಿಖೆ ನಡೆಸಿದ್ದಾರೆ.

ಸ್ಪೋಟದಿಂದಾಗಿ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ದೆಹಲಿಯಾದ್ಯಂತ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಮಾತ್ರವಲ್ಲ ದೇಶದಾದ್ಯಂತ ಎಚ್ಚರಿಕೆಯನ್ನು ವಹಿಸುವಂತೆ ಸಿ ಐ ಎಸ್ ಎಫ್ ಆದೇಶ ನೀಡಿದೆ.

Comments are closed.