ಫಾಸ್ಟ್ಯಾಗ್ ಕಡ್ಡಾಯ : ಸಾಸ್ತಾನ ಟೋಲ್ ಗೆ ಸಾರ್ವಜನಿಕರ ಮುತ್ತಿಗೆ, ಕರನಿರಾಕರಣೆ ಚಳುವಳಿಗೆ ಕರೆ

ಕೋಟ : ದೇಶಾದ್ಯಂತ ಎಲ್ಲಾ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡ ನವಯುಗ ಕಂಪೆನಿ ಸ್ಥಳೀಯರಿಗೆ ನೀಡಲಾಗುತ್ತಿದ್ದ ವಿನಾಯಿತಿಯನ್ನು ನಿರಾಕರಿಸಿದೆ. ಈ ಹಿನ್ನಲ್ಲೆಯಲ್ಲಿ ಸಾಸ್ತಾನ ಟೋಲ್ ಬಳಿ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿಯ ವತಿಯಿಂದ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿದ್ದು, ಕರನಿರಾಕರಣ ಚಳುವಳಿಗೆ ಕರೆ ನೀಡಲಾಗಿದೆ.

ಬೆಳಗ್ಗೆಯಿಂದಲೇ ಟೋಲ್ ಬಳಿ ಜಮಾಯಿಸಿದ ಹೆದ್ದಾರಿ ಜಾಗೃತಿ ಸಮಿತಿ ಹಾಗೂ ಪ್ರತಿಭಟನಾಕಾರರು ಕರನಿರಾಕರಣೆ ಚಳುವಳಿ ಪ್ರಾರಂಭಿಸಿದರು. ಆರಂಭದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಲೇ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿದ್ದಾರೆ.

ಆದರೆ ನವಯುಗ ಕಂಪೆನಿಯ ವಿನಾಯಿತಿ ನಿರಾಕರಿಸುತ್ತಿದ್ದಂತೆಯೇ ಟೋಲ್ ಗೇಟ್ ಗೆ ಸಾವಿರಾರು ಸಂಖ್ಯೆಯಲ್ಲಿನ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದಾರೆ. ಟೋಲ್ ಗೇಟ್ ನ ಎಲ್ಲಾ ಬಾಗಿಲು ಬಂದ್ ಮಾಡುತ್ತಿದ್ದಂತೆಯೇ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆಯಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದಲೂ ಸ್ಥಳೀಯ ವಾಹನಗಳಿಗೆ ರಿಯಾಯಿತಿ ನೀಡುತ್ತಿದ್ದು, ಇದೀಗ ಒಮ್ಮಿಂದೊಮ್ಮೆಲೆ ಸ್ಥಳೀಯರಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ನವಯುಗ ಕಂಪನಿಯ ವಿರುದ್ದ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು. ಗೇಟ್ 1 ರಲ್ಲಿ ಫಾಸ್ಟ್ಯಾಗ್ ಹೊಂದಿದ ವಾಹನಗಳಿಂದ ಸ್ವಯಂ ಆಗಿ ಹಣ ಕಟ್ ಆಗಲಿದ್ದು, ಫಾಸ್ಟ್ಯಾಗ್ ಹೊಂದಿರದ ವಾಹನಗಳು ಗೇಟ್ ತೆಗೆದು ಸಂಚರಿಸಬಹುದಾಗಿದೆ ಎಂದು ಹೇಳಿ ನವಯುಗ ಕಂಪೆನಿಯ ಸಿಬ್ಬಂದಿಗಳು ನುಣುಚಿಕೊಂಡಿದ್ದಾರೆ.

ನವಯುಗ ಕಂಪನಿ ಮ್ಯಾನೇಜರ್ ಬಷೀರ್ ಹಾಗೂ ಹೆದ್ದಾರಿ ಜಾಗೃತಿ ಸಮಿತಿಯ ನಡುವೆ ಮಾತಿನ ಚಕಮಕಿ ನಡೆಯಿತು.ಸ್ಥಳೀಯ ವಾಹನಗಳಿಗೆ ರಿಯಾತಿ ನೀಡಲು ನೀವುಗಳು ಸಹಕರಿಸಬೇಕು. ನೀವೆ ಹೀಗೆ ಮಾಡಿದರೆ ನಿಮ್ಮ ಬಳಿ ಮಾತನಾಡಲು ಏನು ಉಳಿದಿಲ್ಲ ಬದಲಾಗಿ ನಮ್ಮ ಹೋರಾಟದ ಕಾವು ತೀವ್ರಗೊಳಿಸುತ್ತೇವೆ ಎಂದು ಟೋಲ್ ನಿಂದ ಹೊರನಡೆದರು.

ಹೆದ್ದಾರಿ ಜಾಗೃತಿ ಸಮಿತಿ ದಿಶಾ ಸಭೆಯವರೆಗೆ ಮಾನವೀಯತೆಯಿಂದ ಸ್ಥಳೀಯರಿಗೆ ವಿನಾಯಿತಿಯನ್ನು ಕೇಳಿದೆ. ಫಾಸ್ಟ್ಯಾಗ್ ಕಡ್ಡಾಯವೆಂದು ಸೂಚನೆಯನ್ನು ನೀಡಿದ ಹಿನ್ನೆಲೆಯಲ್ಲಿ ಹೆದ್ದಾರಿ ಜಾಗೃತಿ ಸಮಿತಿ ನಾಳೆ ಸಭೆ ಕರೆದಿದೆ. ಟೋಲ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನಮ್ಮೆಲ್ಲಾ ಇಲಾಖೆ ಕೈಜೋಡಿಸಲಿದೆ ಎಂದು ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ ಹೇಳಿದ್ದಾರೆ.

ಫಾಸ್ಟ್ಯಾಗ್ ಕಡ್ಡಾಯದ ವಿರುದ್ದ ಭಾರೀ ಜನಾಕ್ರೋಶ ವ್ಯಕ್ತವಾಗಿದ್ದು, ಹೋರಾಟಗಾರರು ಕರ ನಿರಾಕರಣ ಚಳುವಳಿಗೆ ಕರೆ ನೀಡಿದ್ದಾರೆ. ಸ್ಥಳೀಯರಿಗೆ ವಿನಾಯಿತಿ ವಿಚಾರವಾಗಿ ನಾಳೆ (ಫೆಬ್ರವರಿ 17) ಸಂಜೆ 4 ಗಂಟೆಗೆ ಸಾಸ್ತಾನದ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಸಭೆಯಲ್ಲಿ ಮುಂದಿನ ಹೋರಾಟದ ಕುರಿತು ರೂಪುರೇಷೆ ಸಿದ್ದಪಡಿಸಲು ನಿರ್ಧರಿಸಲಾಗಿದೆ ಎಂದು ಜಾಗೃತಿ ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ತಿಳಿಸಿದ್ದಾರೆ.

ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ ನಾಯಿರಿ, ಕಾರ್ಯದರ್ಶಿ ಅಲ್ವಿನ್ ಅಂದ್ರಾದೆ, ನಿಕಟಪೂರ್ವ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಕಾರ್ಯದರ್ಶಿ ವಿಠ್ಠಲ್ ಪೂಜಾರಿ ಐರೋಡಿ, ದಿನೇಶ್ ಗಾಣಿಗ , ಸಂದೀಪ್ ಕುಂದರ್, ರಾಜೇಶ್ , ನಾಗರಾಜ ಗಾಣಿಗ, ವಿಠ್ಠಲ್ ಪೈ, ದಯಾನಂದ ಶ್ಯಾನುಭಾಗ್, ಭೋಜ ಪೂಜಾರಿ,ಅಚ್ಯುತ್ ಪೂಜಾರಿ, ಬ್ರಹ್ಮಾವರ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ, ಸಾಲಿಗ್ರಾಮ ಪ.ಪಂ ಅಧ್ಯಕ್ಷೆ ಸುಲತಾ ಹೆಗ್ಡೆ,ಸ ದಸ್ಯ ರಾಜು ಪೂಜಾರಿ,ಕೋಟ, ಸಾಲಿಗ್ರಾಮ ಸಾಸ್ತಾನ ವಾಹನ ಚಾಲಕ ಮಾಲಕ ಸಂಘ, ಆಟೋ ಚಾಲಕ ಸಂಘ, ಟೂರಿಸ್ಟ್ ಯೂನಿಯನ್, ಪ್ರಶಾಂತ್ ಶೆಟ್ಟಿ, ಅಜಿತ್ ಶೆಟ್ಟಿ ಕೊತ್ತಾಡಿ ,ವಿಜಯ ಶೆಟ್ಟಿ ಕೊತ್ತಾಡಿ ಉಪಸ್ಥಿತರಿದ್ದರು

Comments are closed.