ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ : ಲಿಫ್ಟ್ ನಲ್ಲಿ ಸಿಲುಕಿ 9 ಮಂದಿ ಸಜೀವ ದಹನ

ಪಶ್ಚಿಮ ಬಂಗಾಳ : ಕಟ್ಟಡದಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಲಿಫ್ಟ್ ನಲ್ಲಿ ಸಲುಕಿ 9 ಮಂದಿ ಸಜೀವ ದಹನವಾಗಿರುವ ಘಟನೆ ಕೊಲ್ಕತ್ತಾದ ರೈಲ್ವೆ ಇಲಾಖೆ ಕಟ್ಟಡದಲ್ಲಿ ನಡೆದಿದೆ.

ಕೋಲ್ಕತ್ತಾದ ಸ್ಟ್ರಾಂಡ್ ರಸ್ತೆಯಲ್ಲಿರುವ ಪೂರ್ವ ರೈಲ್ವೆಯ ಕಚೇರಿಯಲ್ಲಿರುವ ಕಟ್ಟಡದ 12ನೇ ಅಂತಸ್ತಿನಲ್ಲಿ ಸೋಮವಾರ ರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕರ್ತವ್ಯ ನಿರತರಾಗಿದ್ದ ಕೆಲವರು ಕಟ್ಟಡದಲ್ಲಿದ್ದರು. ಈ ವೇಳೆ ಮೇಲಿನ ಅಂತಸ್ತಿನಿಂದ ಕೆಳಗೆ ಇಳಿಯುವುದರೊಳಗೆ 9 ಮಂದಿ ಬೆಂಕಿಯ ಜ್ವಾಲೆಗೆ ಕೆಳಗಿಳಿಯಲಾಗದೆ ಮೃತಪಟ್ಟಿದ್ದಾರೆ.

ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿಗಳು 11 ನೇ ಅಂತಸ್ತಿನಲ್ಲಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ನಾಲ್ಕು ಅಗ್ನಿಶಾಮಕ ದಳದ ಸಿಬ್ಬಂದಿ, ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ. ಇನ್ನಿಬ್ಬರ ಗುರುತು ಪತ್ತೆಯಾಗಬೇಕಷ್ಟೆ. ಇನ್ನು ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುರ್ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ರೈಲ್ವೆ ಸಚಿವ ಪಿಯೂಷ್ ಗೋಯಲ್‌ ಆದೇಶ ನೀಡಿದ್ದಾರೆ.

ಇನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ಪರಿಹಾರ ನೀಡುವ ಬಗ್ಗೆ ಘೋಷಣೆ ಮಾಡಿದ್ದಾರೆ.

Comments are closed.