ಟೋಲ್ ಗಳಲ್ಲಿ ಸ್ಥಳೀಯರಿಗಿಲ್ಲ ವಿನಾಯಿತಿ : ಫೆ.15ರಿಂದ ಫಾಸ್ಟ್ಯಾಗ್ ಕಡ್ಡಾಯ : ಮತ್ತೆ ಉಗ್ರ ಹೋರಾಟದ ಎಚ್ಚರಿಕೆ…!

ಬ್ರಹ್ಮಾವರ : ಕೇಂದ್ರ ಸರಕಾರ ದೇಶದಾದ್ಯಂತ ಟೋಲ್ ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದೆ. ಇದೀಗ ನವಯುಗ ಕಂಪೆನಿ ಗುಂಡ್ಮಿ ಟೋಲ್ ಗಳಲ್ಲಿ ಸ್ಥಳೀಯರಿಗೆ ವಿನಾಯಿತಿಯನ್ನು ನೀರಾಕರಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲೀಗ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾಗಿದೆ.

ಟೋಲ್ ಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದೆ. ಅಲ್ಲದೆ ಹಣ ನೀಡಿ ಸಂಚಾರ ಮಾಡೋದಕ್ಕೆ ಅವಕಾಶವನ್ನು ನಿರಾಕರಿಸಲಾಗುತ್ತಿದೆ. ಇದನ್ನೇ ನೆಪವಾಗಿಟ್ಟುಕೊಂಡ ನವಯುಗ ಕಂಪೆನಿ ಸ್ಥಳೀಯರಿಗೆ ನೀಡಿದ ಟೋಲ್ ವಿನಾಯಿತಿಯನ್ನು ವಾಪಾಸ್ ಪಡೆಯಲು ಮುಂದಾಗಿದೆ.

2015ರಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಗುಂಡ್ಮಿ ಟೋಲ್ ನಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿ ಬೃಹತ್ ಹೋರಾಟವನ್ನು ನಡೆಸಿತ್ತು. ಇದರ ಫಲವಾಗಿಯೇ ಸುಮಾರು 6 ವರ್ಷಗಳಿಂದಲೂ ಸ್ಥಳೀಯರು ಟೋಲ್ ನಿಂದ ವಿನಾಯಿತಿ ಪಡೆದಿದ್ದರು. ಈ ನಡುವಲ್ಲೇ ಹಲವು ಬಾರಿ ನವಯುಗ ಕಂಪೆನಿ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದರೂ ಕೂಡ ಹೆದ್ದಾರಿ ಜಾಗೃತಿ ಸಮಿತಿ ಅವಕಾಶವನ್ನೇ ಕೊಟ್ಟಿರಲಿಲ್ಲ. ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿನ ವಾಹನಗಳಿಗೆ ವಿನಾಯಿತಿ ನೀಡುವಂತೆ ಈ ಹಿಂದೆ ನಡೆದ ಹೋರಾಟದ ವೇಳೆಯಲ್ಲಿ ಸಂಸದರು, ಶಾಸಕರು ಹಾಗೂ ಜಿಲ್ಲಾಡಳಿತ ಟೋಲ್ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದ್ದರು. ಆದರೆ ಇದೀಗ ಕಂಪೆನಿ ಟೋಲ್ ಗಳಲ್ಲಿ ವಿನಾಯಿತಿ ನೀಡದಿರಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸಾಸ್ತಾನದ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಅಧ್ಯಕ್ಷರಾದ ಶ್ಯಾಮ ಸುಂದರ ನಾಯರಿ ಅವರ ನೇತೃತ್ವದಲ್ಲಿ ಸಭೆ ನಡೆಸಿದೆ. ಆರಂಭಿಕ ಹಂತದಲ್ಲಿ ಫೆಬ್ರವರಿ 6 ರಂದು ಮಧ್ಯಾಹ್ನ 2 ಗಂಟೆಗೆ ಸಾಸ್ತಾನದಿಂದ ಉಡುಪಿಯ ವರೆಗೆ ಜಾಥಾ ನಡೆಸಿ, ಜಿಲ್ಲಾಡಳಿತ, ಶಾಸಕರು, ಸಚಿವರನ್ನು ಭೇಟಿಯಾಗಿ ಮನವಿ ಮಾಡಲು ನಿರ್ಧರಿಸಲಾಗಿದೆ. ಒಂದೊಮ್ಮೆ ಸಮಸ್ಯೆ ಪರಿಹಾರವಾಗದೆ ಇದ್ದಲ್ಲಿ ಉಗ್ರ ಹೋರಾಟ ನಡೆಸುವ ಕುರಿತು ತೀರ್ಮಾನಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಅವರು ಮಾತನಾಡಿ, ಸ್ಥಳೀಯರಾಗಿ ನಮ್ಮ ಹಕ್ಕಿನ ಬಗ್ಗೆ ನಾವೇ ಹೋರಾಟ ಮಾಡಬೇಕಾದ ಸ್ಥಿತಿ ಬಂದಿರುವುದು ವಿಪರ್ಯಸ. ಜನಪ್ರತಿನಿಧಿಗಳು ಇದರ ಬಗ್ಗೆ ಗಮನಹರಿಸಬೇಕಿತ್ತು. ನಾವು ಇನ್ನೊಂದು ಸುತ್ತಿನ ಹೋರಾಟಕ್ಕೆ ಸಿದ್ದಗೊಳ್ಳಬೇಕು. ಈ ಹೋರಾಟದಲ್ಲಿ ಹಿಂದಡಿಯಿಟ್ಟರೆ ಜೀವಮಾನವಿಡಿ ಟೋಲ್ ಕಟ್ಟಬೇಕಾದ ಸ್ಥಿತಿ ಬರುತ್ತದೆ. ಹೋರಾಟ ನಡೆಸಿ ಟೋಲ್ ನಿಂದ ಮುಕ್ತರಾಗಬೇಕಾಗಿದೆ ಎಂದಿದ್ದಾರೆ.

ಟೋಲ್ ವಿರುದ್ದದ ಹೋರಾಟದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಹೆದ್ದಾರಿ ಜಾಗೃತಿ ಸಮಿತಿ ಮನವಿ ಮಾಡಿಕೊಂಡಿದೆ. ಒಂದೊಮ್ಮೆ ಕಂಪೆನಿ ಒಮ್ಮೆ ಟೋಲ್ ಸಂಗ್ರಹಕ್ಕೆ ಮುಂದಾದ್ರೆ ಜೀವನ ಪರ್ಯಂತ ಟೋಲ್ ಕಟ್ಟಲೇ ಬೇಕಾಗುತ್ತದೆ. ಹೀಗಾಗಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆಯೂ ಸೂಚಿಸಿದೆ. ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಶ್ಯಾಮ ಸುಂದರ ನಾಯರಿ, ಕಾರ್ಯದರ್ಶಿ ಅಲ್ವಿನ್ ಅಂದ್ರಾದೆ, ಮಾಜಿ ಕಾರ್ಯದರ್ಶಿ ವಿಠಲ ಪೂಜಾರಿ ಐರೋಡಿ, ಪ್ರಶಾಂತ್ ಶೆಟ್ಟಿ, ರಾಜೇಶ್, ನಾಗರಾಜ ಗಾಣಿಗ ಸೇರಿದಂತೆ ವಾಹನ ಚಾಲಕರು, ಮಾಲಕರು ಹಾಗು ಸಾರ್ವಜನಿಕರು ಪಾಲ್ಗೊಂಡಿದ್ದರು.

Comments are closed.