ಮಂಗಳೂರು : ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ಮೂರನೇ ದಿನವೂ ಮುಂದುವರಿದಿದೆ. ಮಾಜಿ ಸಚಿವ ಯು.ಟಿ.ಖಾದರ್ ಸಹೋದರ ಡಾ.ಇಫ್ತಿಕಾರ್ ಗೆ ಶಾಕ್ ಕೊಟ್ಟಿದ್ದ ಐಟಿ ಅಧಿಕಾರಿಗಳು ಬ್ಯಾಂಕ್ ಖಾತೆಯನ್ನು ಸೀಜ್ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಿದ್ದಾರೆ.
ಕಣಚೂರು ವೈದ್ಯಕೀಯ ಕಾಲೇಜಿನ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, ಪಾಲುದಾರಿಕೆ ಹೊಂದಿದ ಹಿನ್ನೆಲೆಯಲ್ಲಿ ಶಾಸಕ ಯು.ಟಿ.ಖಾದರ್ ಸಹೋದರ ಡಾ.ಇಫ್ತಿಕಾರ್ ಅವರಿಗೆ ಸೇರಿದ ಅಪಾರ್ಟ್ ಮೆಂಟ್ ಮೇಲೆ ದಾಳಿಯನ್ನು ನಡೆಸಿದ್ದಾರೆ. ಮಂಗಳೂರು ನಗರದ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಮಹತ್ವದ ದಾಖಲೆಗಳು ಲಭ್ಯವಾಗಿದೆ ಎನ್ನಲಾಗುತ್ತಿದೆ.
ದಾಖಲೆಯ ಜೊತೆಗೆ ದಾಳಿ ನಡೆಸಿರುವ ಅಧಿಕಾರಿಗಳು ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. 5 ಖಾಸಗಿ ಹಾಗೂ 2 ರಾಷ್ಟ್ರಿಕೃತ ಬ್ಯಾಂಕ್ಗಳಲ್ಲಿರುವ ಡಾ ಇಫ್ತಿಕಾರ್ ಹಾಗು ಅವರ ಪತ್ನಿಯ ಬ್ಯಾಂಕ್ ಅಕೌಂಟ್ಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದು, ಮಾಹಿತಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಡಾ.ಇಫ್ತಿಕಾರ್ ಅಬುದಾಬಿಯಲ್ಲಿದ್ದಾರೆನ್ನಲಾಗುತ್ತಿದ್ದು, ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂನೆಯನ್ನು ನೀಡಿದ್ದಾರೆ. ಕೊರೊನಾ ಕಾಲದಲ್ಲಿ ಅಕ್ರಮ ನಡೆಸಿರುವ ಕುರಿತು ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಈ ದಾಳಿ ನಡೆಯುತ್ತಿದೆ. ಅಲ್ಲದೇ ಆದಾಯ ತೆರಿಗೆ ವಂಚನೆ ಮಾಡಿರುವ ಕುರಿತು ಅಧಿಕಾರಿಗಳು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.