ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ; ಅಮೇರಿಕಾದಿಂದ ನಕ್ಷೆ ಬಿಡುಗಡೆ

Jammu Kashmir Map | America-India-Pakistan: ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳು ಹೊಸ ಎತ್ತರಕ್ಕೆ ಏರುತ್ತಿರುವುದಕ್ಕೆ ಸಾಕ್ಷಿಯೆಂಬಂತೆ ಅಮೆರಿಕದ ವ್ಯಾಪಾರ ಪ್ರತಿನಿಧಿ (USTR) ಹಂಚಿಕೊಂಡಿರುವ ಒಂದು ನಕ್ಷೆ ಈಗ ವಿಶ್ವಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತ-ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದ (America-India Trade Deal) ಅಧಿಕೃತ ಪ್ರಕಟಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಈ ನಕ್ಷೆಯಲ್ಲಿ, ಪಾಕ್ ಆಕ್ರಮಿತ ಕಾಶ್ಮೀರ (PoK) ಮತ್ತು ಅಕ್ಸಾಯ್ ಚಿನ್ ಸೇರಿದಂತೆ ಇಡೀ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಭೂಪ್ರದೇಶದ ಒಳಗೆ ತೋರಿಸಲಾಗಿದೆ. ಈ ಮೂಲಕ ಅಮೆರಿಕವು ವಿವಾದಿತ ಪ್ರದೇಶಗಳ ಕುರಿತಾದ ಭಾರತದ ನಿಲುವನ್ನು ಅಧಿಕೃತವಾಗಿ ಬೆಂಬಲಿಸಿದಂತಾಗಿದೆ.

ಈ ಬೆಳವಣಿಗೆಯು ವಿಶೇಷವಾಗಿ ಪಾಕಿಸ್ತಾನ ಮತ್ತು ಚೀನಾಗೆ ದೊಡ್ಡ ರಾಜತಾಂತ್ರಿಕ ಹೊಡೆತ ಎಂದು ವಿಶ್ಲೇಷಿಸಲಾಗುತ್ತಿದೆ. 2020 ರಲ್ಲಿ ಪಾಕಿಸ್ತಾನವು ಗುಜರಾತ್‌ನ ಕೆಲವು ಭಾಗಗಳು ಮತ್ತು ಕಾಶ್ಮೀರವನ್ನು ತನ್ನದೆಂದು ಹಕ್ಕು ಸಾಧಿಸಿ ಅಸಂಬದ್ಧ ನಕ್ಷೆಯನ್ನು ಬಿಡುಗಡೆ ಮಾಡಿತ್ತು. ಅದೇ ರೀತಿ ಚೀನಾ ಕೂಡ ಅರುಣಾಚಲ ಪ್ರದೇಶವನ್ನು ತನ್ನ ಭೂಪಟದಲ್ಲಿ ಸೇರಿಸಿಕೊಳ್ಳುವ ಮೂಲಕ ಕ್ಯಾತೆ ತೆಗೆಯುತ್ತಲೇ ಇತ್ತು. ಆದರೆ ಈಗ ಅಮೆರಿಕದ ಈ ನಕ್ಷೆಯಲ್ಲಿ ಅರುಣಾಚಲ ಪ್ರದೇಶ ಮತ್ತು ಇಡೀ ಕಾಶ್ಮೀರವನ್ನು ಭಾರತದ ಗಡಿಯೊಳಗೆ ತೋರಿಸಿರುವುದು ಈ ಎರಡೂ ದೇಶಗಳ ಸುಳ್ಳು ಹಕ್ಕುಗಳಿಗೆ ನೀಡಿದ ಪ್ರತ್ಯುತ್ತರವಾಗಿದೆ. ಈ ನಕ್ಷೆಯನ್ನು ಹಂಚಿಕೊಳ್ಳುವ ಮೂಲಕ ಅಮೆರಿಕವು ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಮಾನ್ಯ ಮಾಡಿದೆ.

ಸದಾನಂದನ್ ಮಾಸ್ಟರ್: ಎರಡೂ ಕಾಲುಗಳನ್ನು ಕಳೆದುಕೊಂಡರೂ ಧೈರ್ಯಗುಂದದ ಚೇತನದ ರಿಯಲ್‌ ಸ್ಟೋರಿ

ನಕ್ಷೆಯ ವಿವಾದದ ಜೊತೆಗೆ ಈ ವ್ಯಾಪಾರ ಒಪ್ಪಂದವು ಆರ್ಥಿಕವಾಗಿಯೂ ಮಹತ್ವದ್ದಾಗಿದೆ. ಅಮೆರಿಕಕ್ಕೆ ರಫ್ತಾಗುವ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 18ಕ್ಕೆ ಇಳಿಸಲು ನಿರ್ಧರಿಸಲಾಗಿದ್ದು, ಇದರಿಂದ ಭಾರತೀಯ ರಫ್ತುದಾರರಿಗೆ ಮತ್ತು ಕೈಗಾರಿಕೆಗಳಿಗೆ ದೊಡ್ಡ ಮಟ್ಟದ ಲಾಭವಾಗಲಿದೆ.

ಪ್ರತಿಯಾಗಿ ಅಮೆರಿಕದ ಕೃಷಿ ಉತ್ಪನ್ನಗಳು ಮತ್ತು ಹಣ್ಣುಗಳಿಗೆ ಭಾರತದ ಬೃಹತ್ ಮಾರುಕಟ್ಟೆಯಲ್ಲಿ ಸುಲಭ ಪ್ರವೇಶ ಸಿಗಲಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರವು ಎರಡೂ ದೇಶಗಳ ನಡುವಿನ ಆರ್ಥಿಕ ನಂಟು ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಸಚಿವ ಪಿಯೂಷ್ ಗೋಯಲ್ ಅವರ ನೇತೃತ್ವದಲ್ಲಿ ನಡೆದ ಈ ಮಾತುಕತೆಯು ಭಾರತದ ಕೃಷಿ ಮತ್ತು ಡೈರಿ ವಲಯದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories