ಬಿಜೆಪಿ ಜೊತೆ ಜೆಡಿಎಸ್ ವಿಲೀನ : ಸ್ಪೋಟಕ ಹೇಳಿಕೆ ಕೊಟ್ಟ ಎಚ್ಡಿಕೆ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷ ವಿಲೀನವಾಗುತ್ತೆ. ಕುಮಾರಸ್ವಾಮಿ ಬಿಜೆಪಿಯಿಂದ ಸಿಎಂ ಆಗ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪೋಟಕ ಹೇಳಿಕೆ ಯೊಂದನ್ನು ಕೊಟ್ಟಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಏನು ಬೇಕಾದ್ರೂ ಆಗಬಹುದು ಅಂದಿರುವ ಕುಮಾರಸ್ವಾಮಿ ಅವರ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಹೀಗೆ ಆಗುತ್ತದೆ ಎಂದು ಹೇಳುವುದ್ದಕ್ಕೆ ಸಾಧ್ಯವಿಲ್ಲ. ನಮ್ಮ ಪಕ್ಷ ಬಿಜೆಪಿಯ ಬಿ ಟೀಂ ಎಂದು ಕರೆದವರು ನನ್ನ ಮನೆಗೆ ಬಂದರು. ಕೊನೆಗೆ ನಮ್ಮ ಜೊತೆಯೇ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರು. ಮುಂದೆ ರಾಜ್ಯಕ್ಕೆ ಕುಮಾರಸ್ವಾಮಿ ಅನಿವಾರ್ಯತೆ ಬರಬಹುದು ಎಂದು ಅಚ್ಚರಿ ಮೂಡಿಸಿದ್ದಾರೆ.

ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ನಾನು ನಮ್ಮ ಪಕ್ಷವನ್ನು ಎಂದಿಗೂ ವಿಲೀನ ಮಾಡುವುದಿಲ್ಲ. 2021ರಲ್ಲಿ ನಾನು ಸಿಎಂ ಆಗುತ್ತೇನೆಂದು ಭವಿಷ್ಯ ಕೂಡ ಹೇಳುವುದಿಲ್ಲ. ರಾಜಕಾರಣದಲ್ಲಿ ಬದಲಾವಣೆ ‌ಆಗುತ್ತಲೇ ಇರುತ್ತದೆ. ಬಿಜೆಪಿ ಸರ್ಕಾರಕ್ಕೆ ಸಂಖ್ಯಾಬಲ ಅಗತ್ಯದಷ್ಟಿದೆ. ಸದ್ಯಕ್ಕಂತೂ ಬಿಜೆಪಿಗೆ ನಮ್ಮ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪರವಾಗಿ ಕುಮಾರಸ್ವಾಮಿ ಅವರು ಒಲವು ತೋರುತ್ತಿರುವ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯ ಕುಮಾರಸ್ವಾಮಿ ಅವರೇ ಖುದ್ದು ಸ್ಪಷ್ಟನೆಯನ್ನು ನೀಡಿದ್ದಾರೆ. ಬಿಜೆಪಿ ಬಗ್ಗೆ ನಮಗೆ ಯಾವುದೇ ಸಾಫ್ಟ್ ಕಾರ್ನರ್ ಇಲ್ಲ. ವಿರೋಧ ಪಕ್ಷದಲ್ಲಿದ್ದ ಕಾರಣ ಕೇವಲ ವಿರೋಧ ಮಾಡುವುದಲ್ಲ. ನಾಡಿನ ಬೆಳವಣಿಗೆಗೆ ಸಹಕಾರ ನೀಡುವುದು ಕೂಡ ವಿರೋಧ ಪಕ್ಷದ ಕೆಲಸ ಎಂದು ಸ್ಪಷ್ಟಪಡಿಸಿದರು.

Comments are closed.