ಶಾಲಾರಂಭವನ್ನು 1 ವರ್ಷ ಮುಂದಕ್ಕೆ ಹಾಕಿ : ಪೋಷಕರಿಗೆ ಫೀಸ್ ಟೆನ್ಶನ್ ಕೊಡುವುದಿಲ್ಲ : ಕಲ್ಲಡ್ಕ ಪ್ರಭಾಕರ ಭಟ್

0

ಮಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಒಂದು ವರ್ಷ ಶಾಲಾರಂಭವನ್ನು ಮುಂದಕ್ಕೆ ಹಾಕಿ. ಒಂದು ವರ್ಷ ಶೈಕ್ಷಣಿಕ ವರ್ಷವನ್ನು ಮುಂದೂಡುವುದರಿಂದ ಯಾವುದೇ ಸಮಸ್ಯೆಯಿಲ್ಲ. ಇನ್ನು ಸಂಕಷ್ಟದ ಸಮಯದಲ್ಲಿ ನಮ್ಮ ಶಾಲೆಯಲ್ಲಿ ಪೋಷಕರಿಗೆ ಯಾವುದೇ ಕಾರಣಕ್ಕೂ ಫೀಸ್ ಕಟ್ಟುವಂತೆ ಒತ್ತಡ ಹೇರುವುದಿಲ್ಲ ಎಂದು ಕಲ್ಕಡ್ಕದ ಶ್ರೀರಾಮವಿದ್ಯಾಕೇಂದ್ರದ ಅಧ್ಯಕ್ಷರಾದ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಸರಕಾರಗಳು ಅಗಸ್ಟ್, ಸಪ್ಟೆಂಬರ್ ತಿಂಗಳಲ್ಲಿ ಶಾಲೆಯನ್ನು ಆರಂಭಿಸುವುದಾಗಿ ಹೇಳುತ್ತಿವೆ. ಆದ್ರೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಮಕ್ಕಳಿಗೆ ಶಾಲೆಯಲ್ಲಿ ಸಾಕಷ್ಟು ಸವಾಲುಗಳಿವೆ. ಶಾಲೆಯಲ್ಲಿ ಪ್ರತೀ ಮಕ್ಕಳನ್ನೂ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸ್ ಮಾಡಬೇಕು. ಹೀಗೆ ಮಾಡಲು ಪ್ರತೀ ತರಗತಿಯಲ್ಲಿ 40 ಮಕ್ಕಳಿದ್ದರೆ ಇಬ್ಬರು ಕರ್ತವ್ಯ ನಿರ್ವಹಣೆಗೆ ಬೇಕಾಗುತ್ತದೆ. ಇನ್ನು ಮಕ್ಕಳ ಕೈಗೆ ಮಾತ್ರವೇ ಸ್ಯಾನಿಸೈಟ್ ಮಾಡಬೇಕಾ, ಇಲ್ಲಾ ಸಂಪೂರ್ಣ ದೇಹಕ್ಕೆ ಮಾಡಬೇಕಾ ? ಹೀಗೆ ನಿತ್ಯವೂ ಕೆಮಿಕಲ್ ಯುಕ್ತ ಸ್ಯಾನಿಟೈಸ್ ಬಳಕೆ ಮಾಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.

ಇನ್ನು ಶಾಲೆಯ ಬಸ್ಸುಗಳಲ್ಲಿಯೇ ಮಕ್ಕಳನ್ನು ಕರೆತರುವುದಾದ್ರೆ ಸಾಮಾಜಿಕ ಅಂತರ, ಸ್ಯಾನಿಟೈಸ್ ಬಳಕೆ ಮಾಡಬಹುದು. ಆದ್ರೆ ಗ್ರಾಮೀಣ ಭಾಗದಲ್ಲಿ ಅದ್ರಲ್ಲೂ ಸರಕಾರಿ ಬಸ್ಸುಗಳಲ್ಲಿ ಬರುವ ಮಕ್ಕಳ ಸ್ಥಿತಿಯೇನು ?. ಇಷ್ಟೇ ಅಲ್ಲಾ ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಸ್ವಾಭಾವಿಕವಾಗಿ ಶೀತ, ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತದೆ. ಒಂದು ಮಗುವು ಸ್ವಾಭಾವಿಕವಾಗಿ ಸೀನಿದ್ರೆ ಮಗುವನ್ನು ಶಾಲೆಯಿಂದ ಹೊರ ಹಾಕಲಾಗುತ್ತದೆ. ಅಲ್ಲದೇ ಒಂದು ಮಗುವಿಗೆ ಕೊರೊನಾ ಸೋಂಕು ಕಾಣಿಸಿಕೊಂಡ್ರೆ ಇಡೀ ಶಾಲೆಯನ್ನೇ ಸೀಲ್ ಡೌನ್ ಮಾಡಬೇಕಾಗುತ್ತದೆ. ಅಲ್ಲದೇ ಮಕ್ಕಳು ಹಾಗೂ ಮಕ್ಕಳ ಪೋಷಕರನ್ನೂ ಕೂಡ ಕ್ವಾರಂಟೈನ್ ಗೆ ಒಳಪಡಿಸಬೇಕಾಗುತ್ತದೆ. ಅನೇಕ ಪೋಷಕರು ಕೂಡ ಶಾಲೆಗಳನ್ನು ಆರಂಭಿಸಿದ್ರೆ ಮಕ್ಕಳನ್ನು ಕಳುಹಿಸುವುದೇ ಇಲ್ಲಾ ಎಂದಿದ್ದಾರೆ. ಒಂದು ವರ್ಷ ಮುಂದಕ್ಕೆ ಹೋಗುವುದರಿಂದ ಯಾವುದೇ ಸಮಸ್ಯೆಯೂ ಎದುರಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂದಿನ ಕಾಲದಲ್ಲಿ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಲಿಲ್ಲ. ಇದರಿಂದಾಗಿಯೇ ಈ ಸಮಸ್ಯೆ ಉಂಟಾಗಿದೆ. ಆನ್ ಲೈನ್ ಟೀಚಿಂಗ್ ತುಂಬಾನೇ ಡೇಂಜರ್. ಈಗಾಗಲೇ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಆನ್ ಲೈನ್ ಶಿಕ್ಷಣ ಜಾರಿಗೆ ಬರಬಾರದು. ಇನ್ನು ಈ ಬಾರಿ ಶಿಕ್ಷಣ ಸಂಸ್ಥೆಗಳು ಪೋಷಕರ ಪರವಾಗಿ ನಿಲ್ಲಬೇಕು. ಇಷ್ಟು ವರ್ಷ ಆಡಳಿತ ಮಂಡಳಿಯ ಪರವಾಗಿ ನಿಂತಿದ್ದವು. ಆದರೆ ಶಾಲೆಯನ್ನು ಬೆಳೆಸಿದ್ದು ಪೋಷಕರು, ಆಡಳಿತ ಮಂಡಳಿಯಲ್ಲ. ಕೊರೊನಾ ಸಂಕಷ್ಟದ ಕಾಲದಲ್ಲಿ ಪೋಷಕರಿಗೆ ಅನುಕೂಲಕರವಾದ ಸವಲತ್ತುಗಳನ್ನು ಒದಗಿಸಬೇಕು. ಪೋಷಕರು ಹೇಳಿದಂತೆಯೇ ಶಾಲೆಗಳು ನಡೆದುಕೊಳ್ಳಬೇಕು ಎಂದಿದ್ದಾರೆ.

ನಮ್ಮ ಶಾಲೆಯಲ್ಲಿ ಪೋಷಕರಿಗೆ ಫೀಸ್ ಕಟ್ಟುವ ಕುರಿತು ಯಾವುದೇ ಒತ್ತಡವನ್ನೂ ಹೇರಿಲ್ಲ. ನಮಗೆ ತಾಕತ್ತು ಇರುವಷ್ಟು ವೇತನವನ್ನು ಶಿಕ್ಷಕರಿಗೆ ನೀಡುತ್ತೇವೆ. ಶಿಕ್ಷಕರು ಕೂಡ ಕನಿಷ್ಠ ವೇತನದಲ್ಲಿ ದುಡಿಯುವ ಮನಸ್ಸು ಮಾಡಬೇಕು. ಇಡೀ ವಿಶ್ವವೇ ಇಂದು ಸಂಕಷ್ಟದಲ್ಲಿದೆ. ಹೀಗಾಗಿ ಈ ಹೊರೆಯನ್ನು ಯಾರೋ ಒಬ್ಬರ ಹೆಗಲಿಗೆ ಹಾಕುವುದು ಸರಿಯಲ್ಲ. ಬದಲಾಗಿ ಎಲ್ಲರೂ ಹೊರೆಯನ್ನು ತೆಗೆದುಕೊಳ್ಳಬೇಕು. ಹಲವು ಶಾಲೆಗಳು ಸಂಪೂರ್ಣ ಹೊರೆಯನ್ನು ಪೋಷಕರ ಮೇಲೆಯೇ ಹಾಕಿವೆ.

ಇಂತಹ ಸಂದರ್ಭದಲ್ಲಿ ಶಾಲೆಗಳು ಪೋಷಕರನ್ನು ಹಿಂಡುವುದಕ್ಕೆ ಹೊರಟರೆ ಮಹಾಪಾಪ. ಸರಕಾರ ಇಂತಹ ಶಾಲೆಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು. ಶಿಕ್ಷಣ ವ್ಯಾಪಾರಿ ಕೇಂದ್ರವಾಗಿ ಹಲವು ವರ್ಷಗಳೇ ಕಳೆದು ಹೋಗಿದೆ. ಹಲವು ಶಾಲೆಗಳಲ್ಲಿ ಶಿಕ್ಷಣದ ಪ್ರಶ್ನೆಯೇ ಇಲ್ಲಾ, ಕೇವಲ ಹಣಗಳಿಕೆಯೊಂದೇ ಪ್ರಶ್ನೆ. ಮನುಷತ್ವವನ್ನು ಬೆಳೆಸುವುದೇ ಇಲ್ಲಾ. ಯಾಕೆಂದ್ರೆ ಇವರಿಗೆ ಮನುಷ್ಯತ್ವವೇ ಇಲ್ಲಾ ಎಂದಿದ್ದಾರೆ.

Leave A Reply

Your email address will not be published.