ದೊಡ್ಮನೆ ಆಟಕ್ಕೆ ಕೌಂಟ್ ಡೌನ್ ಶುರು…! ತಿಂಗಳ ಕೊನೆ ಭಾನುವಾರ ಆರಂಭವಾಗುತ್ತೆ ಬಿಗ್ ಬಾಸ್ ಸೀಸನ್…8..!!

ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಖ್ಯಾತಿಯ ಬಿಗ್ ಬಾಸ್ ಸೀಸನ್-8 ಯಾವಾಗ ಆರಂಭವಾಗುತ್ತೆ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದ್ದು, ನ್ಯೂಸ್ ನೆಕ್ಸ್ಟ್ ಗೆ ಲಭ್ಯವಾಗಿರೋ ಎಕ್ಸಕ್ಲೂಸಿವ್ ಮಾಹಿತಿ ಪ್ರಕಾರ ಬಿಗ್ ಬಾಸ್ ಸೀಸನ್ 8 ರ ಪ್ರಕ್ರಿಯೆ ಅಧಿಕೃತವಾಗಿ ಆರಂಭಿಸಿರುವ ವಾಹಿನಿ ಫೆ.28 ರಂದು ಶೋ ಆರಂಭಿಸಲು ನಿರ್ಧರಿಸಿದೆ.

ಕೊರೋನಾದಿಂದ ವಿಳಂಬವಾಗಿದ್ದ ಶೋಗೆ ಹಲವಾರು ದಿನಾಂಕ ನಿಗದಿಯಾಗಿತ್ತು. ಆದರೆ ಈಗ ಬಿಗ್ ಬಾಸ್ ಶೋ ಸೀಸನ್ 8 ರ ಪ್ರೋಮೋ ಕೂಡ ತೆರೆ ಕಂಡಿದ್ದು. ಫೆ.28 ರಿಂದ ಬಿಗ್ ಬಾಸ್ ಆರಂಭವಾಗಲಿದೆ. ಫೆ.8 ಸೋಮವಾರದಿಂದಲೇ  ಬಿಗ್ ಬಾಸ್ ಅಭ್ಯರ್ಥಿಗಳಿಗೆ ಕ್ವಾರಂಟೈನ್ ವಿಧಿಸಲಾಗಿದ್ದು, 14 ದಿನಗಳ ಕ್ವಾರಂಟೈನ್, ಕೊರೋನಾ ಟೆಸ್ಟ್ ಬಳಿಕ ಪ್ರೋಮೋಶೂಟ್ ಹಾಗೂ ದೊಡ್ಮನೆ ಎಂಟ್ರಿ ನಡೆಯಲಿದೆ.

ಕೊರೋನಾ ನಿಯಮಗಳನ್ನು ಪಾಲಿಸುವುದು ಅನಿವಾರ್ಯ ಹಾಗೂ ಅಗತ್ಯವಾಗಿರೋದರಿಂದ  ಬಿಗ್ ಬಾಸ್ ಸೀಸನ್ 8 ರ ಆಯ್ದ ಸ್ಪರ್ಧಾಳುಗಳಿಗೆ ಖಾಸಗಿ ಹೊಟೇಲ್ ನಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್ ವಿಧಿಸಲಾಗಿದೆ. ಕ್ವಾರಂಟೈನ್ ಬಳಿಕ ಕೊರೋನಾ ಟೆಸ್ಟ್ ನಡೆಸಲಾಗುತ್ತದೆ. ಕೊರೋನಾ ನೆಗೆಟಿವ್ ಬಂದವರು ಮಾತ್ರ ಶೋಗೆ ಎಂಟ್ರಿ ಪಡೆಯಲಿದ್ದಾರೆ.

ಈಗಾಗಲೇ ಆಕರ್ಷಕವಾದ  ಪ್ರೋಮೋಗೆ ಅಭಿನಯ ಚಕ್ರವರ್ತಿ ಕಿಚ್ಚಸುದೀಪ್ ಜೊತೆಯಾಗಿದ್ದು, ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ 25 ವರ್ಷಗಳನ್ನು ಪೊರೈಸಿದ ಸಂಭ್ರಮದಲ್ಲಿ ದುಬೈ ಬುರ್ಜ್ ಲಖೀಫಾದಲ್ಲಿ ವಿಕ್ರಾಂತ್ ರೋಣ ಪ್ರೋಮೋ ಲಾಂಚ್ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ಸುದೀಪ್ ಕೂಡ ಈಗ ಬಿಗ್ ಬಾಸ್ ಗೆ ಸಿದ್ಧವಾಗುತ್ತಿದ್ದಾರೆ ಎನ್ನಲಾಗಿದೆ.

 ಇನ್ನು ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಗಳ ಲಿಸ್ಟ್ ನಲ್ಲಿ ಕಿರುತೆರೆಯ ರವಿಶಂಕರ್, ಅನಿರುದ್ಧ,ಯಶ್ ತಾಯಿ ಪುಷ್ಪಾ,ಬ್ರಹ್ಮಗಂಟು ಖ್ಯಾತಿಯ ಗೀತಾ ಭಟ್, ನಾಯಕ ನಟ ಸುನೀಲ್, ಅಗ್ನಿಸಾಕ್ಷಿಯ ಸನ್ನಿಧಿ, ಅವಧೂತ ವಿನಯ್ ಗುರೂಜಿ ಸೇರಿದಂತೆ ಹಲವರ ಹೆಸರು ಕೇಳಿಬಂದಿದೆ.

ಆದರೆ ಪುಷ್ಪಾ, ಬ್ರಹ್ಮಗಂಟು ಸೀರಿಯಲ್ ನ ಗೀತಾ ಹಾಗೂ ಅನಿರುದ್ಧ ತಾವು ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಒಟ್ಟಿನಲ್ಲಿ ಕನ್ನಡಿಗರು ಕಾತುರರಾಗಿ ಕಾಯುತ್ತಿದ್ದ ಬಿಗ್ ಬಾಸ್ ಶೋಗೆ ದಿನಗಣನೆ ನಡೆದಿದ್ದು, ಫೆ.28 ರ ಭಾನುವಾರದಿಂದ ಮತ್ತೆ ದೊಡ್ಮನೆ ಆಟ ಕಳೆಕಟ್ಟಲಿದೆ.        

Comments are closed.