ರಾಜ್ಯದಲ್ಲಿ ಕೊರೋನಾ ಅಲೆ ತೀವ್ರಗೊಂಡಿರುವ ಬೆನ್ನಲ್ಲೇ ಔಷಧಗಳ ಕೊರತೆ ಜೊತೆಗೆ ಇದೀಗ ವಾಕ್ಸಿನ್ ಕೊರತೆಯೂ ತಲೆದೋರಿದೆ. ಈ ಮಧ್ಯೆ ವಾಕ್ಸಿನ್ ಕೊರತೆ ಬಗ್ಗೆ ಹೈಕೋರ್ಟ್ ಗೆ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ವೇಳೆ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಲಸಿಕೆ ಒದಗಿಸಲು ನಿಮ್ಮಿಂದಾಗದಿದ್ದರೇ ಒಪ್ಪಿಕೊಳ್ಳಿ ಎಂದು ಚಾಟಿ ಬೀಸಿದೆ.

ಲಸಿಕೆಯ ಕೊರತೆ ಬಗ್ಗೆ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ವೇಳೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ನ್ಯಾಯಪೀಠ, ರಾಜ್ಯದಲ್ಲಿ 6 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಇದರಲ್ಲಿ 1 ಪರ್ಸೆಂಟ್ ಜನರಿಗೂ ಇನ್ನು ವಾಕ್ಸಿನ್ ಒದಗಿಸಿಲ್ಲ ಎಂಬುದನ್ನು ಉಲ್ಲೇಖಿಸಿದೆ.

ಅಷ್ಟೇ ಅಲ್ಲ, ಇನ್ನೂ 31 ಲಕ್ಷ ಜನರಿಗೆ ನೀವು ವಾಕ್ಸಿನ್ ನೀಡಬೇಕು. ನಿಮ್ಮಿದಾಗದಿದ್ದರೇ ಲಿಖಿತದಲ್ಲಿ ವಾಕ್ಸಿನ್ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಬರೆದುಕೊಡಿ ನ್ಯಾಯಾಲಯ ದಾಖಲಿಸಿಕೊಳ್ಳಲಿದೆ ಎಂದಿದೆ.

ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ ನ್ಯಾಯಾಲಯ, 1 ನೇ ಡೋಸ್ ತೆಗೆದುಕೊಂಡವರಿಗೆ 2 ನೇ ಡೋಸ್ ಸಿಕ್ಕಿಲ್ಲ. 2 ನೇ ಡೋಸ್ ತೆಗೆದುಕೊಳ್ಳುವುದು ಜನರ ಹಕ್ಕಲ್ಲವೇ 26 ಲಕ್ಷ ಜನರಿಗೆ ವಾಕ್ಸಿನ್ ಕೊರತೆಯಿದೆ. ಈ ಗ್ಯಾಪ್ ನ್ನು ಹೇಗೆ ಸರಿಪಡಿಸುತ್ತೀರಿ ಎಂದು ಪ್ರಶ್ನಿಸಿದೆ.

ಇದಲ್ಲದೇ ಒಂದನೇ ವಾಕ್ಸಿನ್ ಬಳಿಕ ಎರಡನೇ ವಾಕ್ಸಿನ್ ವಿಳಂಬವಾದರೇ ತೊಂದರೆ ಇಲ್ಲವೇ ಎಂದು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೂ ಪ್ರಶ್ನೆ ಮಾಡಿತ್ತು. ಇದಕ್ಕೆ ಕೇಂದ್ರ ಸರ್ಕಾರದ ಪರ ಎಎಸ್ಜಿ ಐಶ್ವರ್ಯ ಭಾಟಿ ವಾಕ್ಸಿನ್ ವಿಳಂಬವಾದರೇ ಒಂದನೇ ಡೋಸ್ ವಿಫಲವಾಗಲ್ಲ. ಕೋವ್ಯಾಕ್ಸಿನ್ ಲಸಿಕೆಯಾದರೇ ಎರಡನೇ ಡೋಸ್ ಗೆ 6 ವಾರ ಹಾಗೂ ಕೋವಿಶೀಲ್ಡ್ ಆದರೇ 8 ವಾರಗಳ ಕಾಲಾವಕಾಶ ಇದೆ ಎಂದು ಉತ್ತರಿಸಿದೆ.

ಆದರೆ ವಾಕ್ಸಿನ್ ಪೊರೈಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಹೈಕೋರ್ಟ್ ಜನರು ತೆಗೆದುಕೊಂಡ ಮೊದಲನೇ ಡೋಸ್ ವಾಕ್ಸಿನ್ ದಂಡವಾಗದಂತೆ ಎರಡನೇ ಡೋಸ್ ಒದಗಿಸಲು ಯೋಜನೆ ರೂಪಿಸುವಂತೆ ಸೂಚಿಸಿದೆ.
