ಸಂಕ್ರಾಂತಿಗೆ ರಾಜ್ಯದಲ್ಲಿ ಶಾಲಾರಂಭ ಫಿಕ್ಸ್ !! ಆರೋಗ್ಯ ಇಲಾಖೆ ಕೊಡುತ್ತಾ ಗ್ರೀನ್ ಸಿಗ್ನಲ್ ?

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕೊಂಚ ಕಡಿಮೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ಸಿದ್ದತೆ ನಡೆಯುತ್ತಿದೆ. ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಇಲಾಖೆ ಈಗಾಗಲೇ ಶಾಲಾರಂಭಕ್ಕೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಆರೋಗ್ಯ ಇಲಾಖೆಯ ಅನುಮತಿ ಸಿಕ್ಕರೆ ಸಂಕ್ರಾಂತಿಗೆ ಶಾಲೆಗಳು ತೆರೆಯೋದು ಖಚಿತ.

ರಾಜ್ಯದಲ್ಲಿ ಈಗಾಗಲೇ ಜನವರಿ 1ರಿಂದ ವಿದ್ಯಾಗಮ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಶಿಕ್ಷಣ ಸಚಿವರು ಶಾಲಾರಂಭವಲ್ಲ, ವಿದ್ಯಾಗಮ ಅನ್ನುತ್ತಿದ್ದರೂ ಕೂಡ ವಿದ್ಯಾಗಮ ಹೆಸರಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲಾಗುತ್ತಿದೆ. ಇದರ ನಡುವಲ್ಲೇ ಸಂಕ್ರಾತಿ ಬಳಿಕ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ಸಿದ್ದತೆಗಳನ್ನು ಮಾಡಿಕೊಂಡಿದೆ. ಶಿಕ್ಷಣ ತಜ್ಞರು ಕೂಡ ಶಾಲಾರಂಭಕ್ಕೆ ಪಟ್ಟು ಹಿಡಿದಿದ್ದಾರೆ. ಮಾತ್ರವಲ್ಲ ತಾಂತ್ರಿಕ ಸಲಹಾ ಸಮಿತಿ ಕೂಡ ಹೊಸ ವರ್ಷಕ್ಕೆ ಶಾಲೆಗಳ ಪುನರಾರಂಭಕ್ಕೆ ಶಿಫಾರಸ್ಸು ಮಾಡಿದೆ.

ಶಿಕ್ಷಣ ಇಲಾಖೆ ಈಗಾಗಲೇ ಶಾಲಾರಂಭಕ್ಕೆ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಆರೋಗ್ಯ ಇಲಾಖೆಯ ಅನುಮತಿಗಾಗಿ ಕಾಯುತ್ತಿದೆ.
ರಾಜ್ಯದಲ್ಲಿ ಶಾಲಾರಂಭದ ಕುರಿತು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ತಾಂತ್ರಿಕ ಸಮಿತಿ ವರದಿಯನ್ನು ನೀಡಿದೆ. ಆದರೆ ಆರೋಗ್ಯ ಇಲಾಖೆ ವರದಿಯನ್ನು ನೀಡಿಲ್ಲ. ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲಾರಂಭ ಮಾಡುವುದಾದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಇನ್ನೊಂದೆಡೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗಾಗಲೇ ಶಾಲಾರಂಭದ ಕುರಿತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಶಾಲಾರಂಭ ಮಾಡಿದ್ರೆ ಎದುರಾಗುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಶಾಲಾರಂಭದ ಕುರಿತು ಸಿದ್ದತೆಗಳು ಪೂರ್ಣಗೊಂಡಿದ್ದು, ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Comments are closed.