ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಪ್ಯೂ : ವೀಕೆಂಡ್ ಲಾಕ್ ಡೌನ್ : ಏನಿರುತ್ತೆ..? ಏನಿರಲ್ಲ ?

ಬೆಂಗಳೂರು : ಕೊರೊನಾ ಸೋಂಕಿನ ಎರಡನೇ ಅಲೆಯ ಆರ್ಭಟಕ್ಕೆ ಕರುನಾಡು ತತ್ತರಿಸಿ ಹೋಗಿದೆ. ರಾಜ್ಯ ಸರಕಾರ ಹೊಸ ಮಾರ್ಗಸೂಚಿ ಯನ್ನು ಪ್ರಕಟಿಸಿದ್ದು, ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇಂದಿನಿಂದ ರಾಜ್ಯದಾದ್ಯಂತ ನೈಟ್ ಕರ್ಪ್ಯೂ ಜಾರಿಗೆ ಬಂದಿದ್ದು, ಶನಿವಾರ ಹಾಗೂ ಭಾನುವಾರ ಇಡೀ ಕರ್ನಾಟಕವೇ ಬಂದ್ ಆಗಲಿದೆ.

ಇಂದು ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಕೂಡ ನೈಟ್ ಕರ್ಪ್ಯೂವನ್ನು ಜಾರಿಗೆ ತರಲಾಗುತ್ತಿದೆ. ಈ ವೇಳೆಯಲ್ಲಿ ದೂರದೂರು ಗಳಿಗೆ ಪ್ರಯಾಣಿಸುವವರು ಕಡ್ಡಾಯವಾಗಿ ಟಿಕೆಟ್ ತೋರಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅನಗತ್ಯ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗಿದೆ. ಆಟೋ, ಮ್ಯಾಕ್ಸಿ ಕ್ಯಾಬ್ ಹಾಗೂ ತುರ್ತು ಸಂದರ್ಭದಲ್ಲಿ ಸ್ವತಃ ವಾಹನದಲ್ಲಿ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ಸರಕು ಸಾಗಾಣಿಕೆ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಓಡಾಟಕ್ಕೆ ವಿಶೇಷ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇ ಬೇಕಾಗಿದೆ. ಹೊರ ರಾಜ್ಯಗಳಿಂದ ಬರುವವರು ಕಡ್ಡಾಯವಾಗಿ ಆರ್ ಟಿಪಿಸಿಆರ್ ಟೆಸ್ಟ್ ವರದಿಯನ್ನು ತರಲೇ ಬೇಕು.

ಇನ್ನು ಕೊರೊನಾ ಎರಡನೇ ಆರಂಭವಾದ ನಂತರದಲ್ಲಿ ಇದೇ ಮೊದಲ ಬಾರಿಗೆ ವೀಕೆಂಡ್ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯ ವರೆಗೆ ಕರ್ನಾಟಕ ಸಂಪೂರ್ಣವಾಗಿ ಬಂದ್ ಆಗಲಿದೆ. ಈ ವೇಳೆಯಲ್ಲಿ ನಿತ್ಯ ಬಳಕೆಯ ಸಾಮಗ್ರಗಳ ಖರೀದಿ ಅವಕಾಶವನ್ನು ಕಲ್ಪಿಸಲಾಗಿದೆ. ತುರ್ತು ಸೇವಾ ವಾಹನಗಳ ಬಳಕೆ ಅವಕಾಶ ಕಲ್ಪಿಸಲಾಗಿದೆ. ಹೊರತು ಪಡಿಸಿ ಅನಗತ್ಯ ಓಡಾಟಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗಿದೆ.

ಯಾವುದಕ್ಕೆ ನಿಷೇಧ ..?
ಶೈಕ್ಷಣಿಕ ಕೇಂದ್ರಗಳಾದ ಶಾಲೆ, ಕಾಲೇಜು, ತರಬೇತಿ ಕೇಂದ್ರಗಳನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಸೂಚಿಸಲಾಗಿದ್ದುಮ ಆನ್‍ಲೈನ್ ಮೂಲಕ ಶಿಕ್ಷಣ ಮುಂದುವರಿಯಲಿದೆ. ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಯೋಗ ಕೇಂದ್ರ, ಕ್ರೀಡಾ ಸ್ಟೇಡಿಯಂ, ಸ್ವಿಮ್ಮಿಂಗ್ ಪೂಲ್, ಪಾರ್ಕ್, ಬಾರ್ ಸೇರಿದಂತೆ ಜನ ಸೇರುವ ಸ್ಥಳಗಳಿಗೆ ನಿರ್ಬಂಧ ಹೇರಲಾಗಿದೆ. (ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ಕ್ರೀಡೆಗಳಿಗೆ ತರಬೇತಿಗಾಗಿ ವಿನಾಯ್ತಿ), ಸಾಮಾಜಿಕ/ಧಾರ್ಮಿಕ/ರಾಜಕೀಯ/ಕ್ರೀಡಾ/ಮನರಂಜನಾ/ಶೈಕ್ಷಣಿಕ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ತರಬೇತಿಗಾಗಿ ಮಾತ್ರ ಕ್ರೀಡಾ ಮೈದಾನಗಳು ತೆರೆದಿರುತ್ತವೆ. ಆದರೆ ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ಮಸೀದಿ, ಚರ್ಚ್ ಗಳು ಸಂಪೂರ್ಣವಾಗಿ ಬಂದ್ ಆಗಲಿದ್ದು, ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲು ಅರ್ಚಕರು ಹಾಗೂ ಧರ್ಮಗುರುಗಳಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ.

ಯಾವುದಕ್ಕೆ ಅವಕಾಶ ..?
ಹೊಸ ಮಾರ್ಗಸೂಚಿಯ ಪ್ರಕಾರ ರಾಜ್ಯದಲ್ಲಿ ಹೋಟೆಲ್, ರೆಸ್ಟೋರೆಂಟ್ ತೆರೆದಿರುತ್ತವೆ. ಆದರೆ ಕೇವಲ ಪಾರ್ಸೆಲ್ ಗೆ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗಿದೆ. ಶನಿವಾರ ಹಾಗೂ ಭಾನುವಾರ ಹೊರತುಪಡಿಸಿ ಮದ್ಯದಂಗಡಿಗಳಲ್ಲಿ ಪಾರ್ಸೆಲ್ ನೀಡಬಹುದಾಗಿದೆ. ಇನ್ನು ಕಟ್ಟಡ ಕಾಮಗಾರಿ ನಡೆಸಲು ಅವಕಾಶವನ್ನು ನೀಡಲಾಗಿದ್ದು, ಬ್ಯಾಂಕ್, ವಿಮೆ ಕಚೇರಿ, ಎಟಿಎಂಗಳು, ಇ ಕಾಮರ್ಸ್, ಕೋಲ್ಡ್ ಸ್ಟೋರೇಜ್, ವೇರ್ ಹೌಸಿಂಗ್ ಗಳು ಎಂದಿನಂತೆಯೇ ಕಾರ್ಯನಿರ್ವಹಿಸಲಿವೆ. ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವನ್ನು ಹೇರಿಲ್ಲ. ಅಲ್ಲದೇ ಸರಕಾರಿ ಚೇರಿಗಳಲ್ಲಿ ಶೇ.50 ಸಿಬ್ಬಂದಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ. ಇನ್ನು ಜನರ ನಿತ್ಯಬಳಕೆಯ ದಿನಸಿ, ಹಣ್ಣು, ತರಕಾರಿ, ಹಾಲು, ಔಷಧಿ ಮಳಿಗೆ ತೆರೆದಿರಲಿವೆ.

ಮದುವೆಗೆ ನಿರ್ಬಂಧ ಹೇರಲಾಗಿದ್ದು ಕೇವಲ 50 ಮಂದಿಗೆ ಮಾತ್ರವೇ ಪಾಲ್ಗೊಳ್ಳಬಹುದಾಗಿದೆ. ಅಲ್ಲದೇ ಅಂತ್ಯಕ್ರಿಯೆಗೆ ಕೇವಲ 20 ಜನಕ್ಕೆ ಅನುಮತಿ ನೀಡಲಾಗಿದೆ. ಅನಗತ್ಯ ಓಡಾಟವನ್ನು ತಪ್ಪಿಸುವ ಸಲುವಾಗಿ ಐಟಿ-ಬಿಟಿ ಕಂಪೆನಿಗಳ ಸಿಬ್ಬಂದಿಗಳಿಗೆ ವರ್ಕ್ ಫ್ರಮ್ ಹೋಂಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಇನ್ನು ಕೋವಿಡ್ ಮಾರ್ಗಸೂಚಿಯ ಪ್ರಕಾರ ಸೆಲೂನ್ ಶಾಪ್‍ಗಳು, ಸ್ಪಾ, ಬ್ಯೂಟಿ ಪಾರ್ಲರ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ ಮೀನುಗಾರಿಕೆ ಹಾಗೂ ಮೀನುಗಾರಿಕೆಗೆ ಅವಲಂಬಿತ ಚಟುವಟಿಕೆಗಳನ್ನು ನಡೆಸಬಹುದಾಗಿದೆ.

Comments are closed.