ಸೋಮವಾರ, ಏಪ್ರಿಲ್ 28, 2025
HomeBreakingCp yogeshwar: ಮತ್ತೆ ನಾಯಕತ್ವ ಬದಲಾವಣೆ ಅಖಾಡಕ್ಕಿಳಿದ ಸೈನಿಕ….! ದಿಢೀರ್ ದೆಹಲಿಗೆ ದೌಡಾಯಿಸಿದ ಸಿ.ಪಿ.ಯೋಗೇಶ್ವರ್…!!

Cp yogeshwar: ಮತ್ತೆ ನಾಯಕತ್ವ ಬದಲಾವಣೆ ಅಖಾಡಕ್ಕಿಳಿದ ಸೈನಿಕ….! ದಿಢೀರ್ ದೆಹಲಿಗೆ ದೌಡಾಯಿಸಿದ ಸಿ.ಪಿ.ಯೋಗೇಶ್ವರ್…!!

- Advertisement -

ಬಿಜೆಪಿಯಲ್ಲಿ ತಣ್ಣಗಾಗಿದ್ದ ನಾಯಕತ್ವ ಬದಲಾವಣೆ  ಸರ್ಕಸ್ ಮತ್ತೆ ಜೀವ ಪಡೆದುಕೊಂಡಿದ್ದು, ನಾಯಕತ್ವ ಬದಲಾವಣೆಯ ಸೂತ್ರಧಾರ ಎಂದು ಬಿಂಬಿತವಾಗಿರುವ ಸಿ.ಪಿ.ಯೋಗೇಶ್ವರ್ ದೆಹಲಿಗೆ ದೌಡಾಯಿಸಿದ್ದಾರೆ. ಸಿಪಿವೈ ದೆಹಲಿ ಭೇಟಿಯೊಂದಿಗೆ ಮತ್ತೆ ಬಿಜೆಪಿ ಪಾಳಯದಲ್ಲಿ  ರಾಜಕೀಯ ಚರ್ಚೆ ಬಿರುಸುಗೊಂಡಿದೆ.  

ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದ ಪರೀಕ್ಷೆ ಬರೆದಿದ್ದು ಶೀಘ್ರದಲ್ಲೇ ಫಲಿತಾಂಶ ಹೊರಬೀಳಲಿದೆ ಎಂಬ ಖಡಕ್ ಸಂದೇಶ ನೀಡಿದ್ದ ಸಿ.ಪಿ.ಯೋಗೇಶ್ವರ್ ದೀಢೀರ್ ದೆಹಲಿಗೆ ದೌಡಾಯಿಸಿದ್ದಾರೆ. ದೆಹಲಿಗೆ ತೆರಳಿರೋ ಯೋಗೇಶ್ವರ್ ಕರ್ನಾಟಕಭವನದಲ್ಲಿ ವಾಸ್ತವ್ಯ ಹೂಡದೆ ಖಾಸಗಿ ಹೊಟೇಲ್ ನಲ್ಲಿ ಉಳಿದುಕೊಂಡಿದ್ದಾರೆ.

ನಾಯಕತ್ವ ಬದಲಾವಣೆಯ ಕುರಿತು ಯಾವುದೇ ಚರ್ಚೆ,ಪ್ರಸ್ತಾಪವಿಲ್ಲ. ಬಿಜೆಪಿಯ ನಾಯಕರು ಬಿಎಸ್ವೈ, ಅವರೇ ಮುಖ್ಯಮಂತ್ರಿ ಎಂದು ಇತ್ತೀಚಿಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಸ್ಪಷ್ಟಪಡಿಸಿದ್ದರು.

ಆದರೆ ಈ ಸ್ಪಷ್ಟನೆ ನೀಡಿದ ಒಂದು ವಾರದಲ್ಲೇ ಮತ್ತೆ ಚಟುವಟಿಕೆ ಗರಿಗೆದರಿದೆ. ಯೋಗೇಶ್ವರ್ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಿಎಂ ಬಿಎಸ್ವೈ ಹಾಗೂ ಅವರ ಪುತ್ರ ವಿಜಯೇಂದ್ರ್ ಅವರ ಅಕ್ರಮಗಳ ದಾಖಲೆಯನ್ನು ನೀಡಲಿದ್ದಾರೆ ಎನ್ನಲಾಗಿದೆ.

ಅಲ್ಲದೇ ರಾಜ್ಯದಲ್ಲಿ ಬಿಎಸ್ವೈ ಸರ್ಕಾರದಲ್ಲಿ ನಡೆಯುತ್ತಿರುವ ಹಸ್ತಕ್ಷೇಪ, ಸಿಎಂ ವಿರುದ್ಧ ಅಸಮಧಾನಗೊಂಡಿರುವ ಶಾಸಕರು, ಅದಕ್ಕೆ ಕಾರಣಗಳು ಹೀಗೆ ಎಲ್ಲ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರಲಿದ್ದಾರೆ ಎನ್ನಲಾಗುತ್ತಿದೆ.

ಸಿ.ಪಿ.ಯೋಗೇಶ್ವರ್ ದೆಹಲಿಗೆ ತೆರಳಿದ ವೇಳೆಯಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡ ದೆಹಲಿಗೆ ತೆರಳಿದ್ದು, ನಾನು ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಬಂದಿದ್ದೇನೆ. ನನಗೆ ಸಿ.ಪಿ.ಯೋಗೇಶ್ವರ್ ಆಗಮಿಸಿರುವ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.

ಅಲ್ಲದೇ ಸಿ.ಪಿ.ಯೋಗೇಶ್ವರ್ ನಾಯಕತ್ವ ಬದಲಾವಣೆಯ ವಿಚಾರದಲ್ಲಿ ಯಾವ ರೀತಿ ಪರೀಕ್ಷೆ ಬರೆದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನೀವು ಈ ವಿಚಾರವನ್ನು ಅವರಿಂದಲೇ ತಿಳಿದುಕೊಳ್ಳಿ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಒಟ್ಟಿನಲ್ಲಿ ಕೆಲವು ದಿನಗಳಿಂದ ತಣ್ಣಗಾಗಿದ್ದ ಬಿಜೆಪಿ ನಾಯಕತ್ವ ಬದಲಾವಣೆ ಬೆಂಕಿ ಮತ್ತೆ ಹೊಗೆಯಾಡಲಾರಂಭಿಸಿದ್ದು, ಸಿ.ಪಿ.ಯೋಗೇಶ್ವರ್ ದೆಹಲಿ ಭೇಟಿ ಬಳಿಕ ಸ್ಪಷ್ಟ ಚಿತ್ರಣ ಸಿಗೋ ಸಾಧ್ಯತೆ ಇದೆ.

RELATED ARTICLES

Most Popular