ಕೊನೆಗೂ ತಲೆಯಿಂದ ತೆನೆ ಇಳಿಸಿದ ಮಾಜಿಸಿಎಂ ಪುತ್ರ….!!ಕೈ ಹಿಡಿದು ರಾಜಕೀಯ ಅದೃಷ್ಟ ಪರೀಕ್ಷೆಗಿಳಿದ ಮಧು ಬಂಗಾರಪ್ಪ…!!

ಸಾಲು ಸಾಲು ಸೋಲುಗಳಿಂದ ಕಂಗೆಟ್ಟು ರಾಜಕೀಯ ಸನ್ಯಾಸ ತೆಗೆದುಕೊಂಡಂತೆ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಮಾಜಿಸಿಎಂ ಪುತ್ರ ಹಾಗೂ ಜೆಡಿಎಸ್ ಯುವನಾಯಕ ಮಧುಬಂಗಾರಪ್ಪ ಕೊನೆಗೂ ತಲೆಯಿಂದ ತೆನೆಯ ಹೊರೆ ಇಳಿಸಿದ್ದಾರೆ. ಅಷ್ಟೇ ಅಲ್ಲ ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವ ನೀರಿಕ್ಷೆಯೊಂದಿಗೆ ಕಾಂಗ್ರೆಸ್ ನ ಕೈ ಹಿಡಿದಿದ್ದಾರೆ.

ಸಹೋದರನ ಎದುರಿನ ಸೋಲಿನಿಂದ ಕಂಗೆಟ್ಟಿದ್ದ ಮಧು ಬಂಗಾರಪ್ಪ ಕಳೆದ ವಿಧಾನಸಭೆ ಚುನಾವಣೆ ಬಳಿಕ ಬಹುತೇಕ ರಾಜಕೀಯದಿಂದ ದೂರವೇ ಉಳಿದಿದ್ದರು.  ಅಷ್ಟೇ ಅಲ್ಲ ಜೆಡಿಎಸ್ ತೊರೆಯುವ ಮಾತನ್ನಾಡಿದ್ದರು. ಈ ಮಧ್ಯೆ ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಕಾಂಗ್ರೆಸ್ ಸೇರುತ್ತಾರೆ ಎಂಬ ಊಹೆಗೆ ಕಾರಣವಾಗಿತ್ತು.

ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದಷ್ಟೇ ಹೇಳಿದ್ದ ಮಧು ಬಂಗಾರಪ್ಪ ಕೊನೆಗೂ ಜೆಡಿಎಸ್ ತೊರೆದು  ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮನಸ್ಸು ಮಾಡಿದ್ದಾರೆ. ಗುರುವಾರ ಮಾಜಿಸಿಎಂ ಸಿದ್ಧರಾಮಯ್ಯ ಸಮ್ಮುಖದಲ್ಲಿ ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ.

ಜೆಡಿಎಸ್ ನಿಂದ ಸ್ಪರ್ಧಿಸಿದ ಎಲ್ಲ ಚುನಾವಣೆಯಲ್ಲಿ ಸೋತಿರುವ ಮಧು ಬಂಗಾರಪ್ಪ ಜೆಡಿಎಸ್ ನಿಂದ ಅಂತರ ಕಾಯ್ದುಕೊಳ್ಳುತ್ತ ಬಂದಿದ್ದರು. ಇನ್ನು ಮಧು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಈ ಹಿಂದೆಯೇ ಖಾರವಾಗಿ ಪ್ರತಿಕ್ರಿಯಿಸಿದ್ದ ಮಾಜಿಸಿಎಂ ಕುಮಾರಸ್ವಾಮಿ ವಿಧಾನಸಭೆ ಚುನಾವಣೆ ಬಳಿಕ ಮಧು ನನ್ನನ್ನು ಸಂಪರ್ಕಿಸಿಲ್ಲ. ಆತನ ತಂದೆಗಿಂತಲೂ ಹೆಚ್ಚು ರಾಜಕೀಯವಾಗಿ ಆತನನ್ನು ಬೆಳೆಸುವ ಕೆಲಸ ನಾನು ಮಾಡಿದ್ದೇನೆ ಎಂದು ಟಾಂಗ್ ನೀಡಿದ್ದರು.

ಯಾವುದೇ ಟೀಕೆಗಳಿಗೂ ಉತ್ತರ ನೀಡದೇ ಮೌನವಾಗಿದ್ದ ಮಧು ಈಗ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರ ಸಹೋದರರ ಸವಾಲಿಗೆ ಸಾಕ್ಷಿಯಾಗಿತ್ತು. ಆದರೆ ಮಧು ಬಂಗಾರಪ್ಪ ಸಹೋಧರ ಹಾಗೂ ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪ ವಿರುದ್ಧ 20ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲನ್ನಪ್ಪಿದ್ದರು.

ಅದಕ್ಕೂ ಮೊದಲು ಮಧುಬಂಗಾರಪ್ಪ ಲೋಕಸಭಾ ಚುನಾವಣೆಯಲ್ಲೂ ಸೋಲುಂಡಿದ್ದರು. ಹೀಗಾಗಿ ರಾಜಕೀಯವಾಗಿ ಪುನಶ್ಚೇತನ ಪಡೆಯಲು ಬಯಸಿರುವ ಮಧು ಬಂಗಾರಪ್ಪ ಕಾಂಗ್ರೆಸ್ ಆಯ್ಕೆಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ರಾಜಕೀಯವಾಗಿ ಬಿಜೆಪಿಯ ಗಟ್ಟಿ ನೆಲೆಯಾಗಿರುವ ಶಿವಮೊಗ್ಗ ಜಿಲ್ಲೆ ಮಧು ಬಂಗಾರಪ್ಪಗೆ ಕಾಂಗ್ರೆಸ್ ನಿಂದ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಅವಕಾಶ ನೀಡುತ್ತಾ ಅನ್ನೋದು ಸಧ್ಯದ ಕುತೂಹಲ.

Comments are closed.