ರಾಜ್ಯದಲ್ಲಿ ಲವ್ ಜಿಹಾದ್ ಬೀಳಲಿದೆ ಬ್ರೇಕ್…! ಶೀಘ್ರವೇ ಕಾನೂನು ಜಾರಿ ಎಂದ ಸಚಿವ ಬೊಮ್ಮಾಯಿ…!

ಉಡುಪಿ: ರಾಜ್ಯದಲ್ಲಿ ಲವ್ ಜೆಹಾದ್ ಕಾನೂನಿನ ಪರ-ವಿರುದ್ಧ ವಾದ-ಪ್ರತಿವಾದಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಗೃಹ ಸಚಿವ ಬೊಮ್ಮಾಯಿ ರಾಜ್ಯದಲ್ಲಿ ಕಾನೂನು ಜಾರಿ ಖಚಿತ ಎಂದಿದ್ದಾರೆ. ಕನಕದಾಸ ಜಯಂತಿ ಸಮಾರಂಭದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಬೊಮ್ಮಾಯಿ ಸಧ್ಯದಲ್ಲೇ ಕಾನೂನು ಜಾರಿಯಾಗಲಿದೆ ಎಂದಿದ್ದಾರೆ.

ಲವ್ ಜೆಹಾದ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಇತ್ತೀಚಿಗೆ ಲವ್ ಜೆಹಾದ್ ಕಾನೂನಿನ ಕುರಿತು ಸುಗ್ರೀವಾಜ್ಞೆ ಹೊರಡಿಸಿದೆ. ಆ ಪ್ರತಿಯನ್ನು ಪಡೆದುಕೊಂಡು ಕಾನೂನು ತಜ್ಞರೊಂದಿಗೆ ಚರ್ಚಿಸಿ ರಾಜ್ಯದಲ್ಲೂ ಸುರಕ್ಷಿತವಾದ ಲವ್ ಜೆಹಾದ್ ತಡೆ ಕಾನೂನು ರೂಪಿಸಲಾಗುತ್ತದೆ. ಇದರಲ್ಲಿ ಯಾವುದೇ ಹಿಂಜರಿಕೆಯ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಇನ್ನು ಈ ಕಾನೂನಿಗೆ ಡಿಕೆಶಿ ಹಾಗೂ ಸಿದ್ಧರಾಮಯ್ಯ ವಿರೋಧದ ಕುರಿತು ಮಾತನಾಡಿದ ಬೊಮ್ಮಾಯಿ, ಸಿದ್ಧರಾಮಯ್ಯ ಇನ್ನೂ ಮೊಘಲರ ಕಾಲದಲ್ಲಿಯೇ ಇದ್ದಾರೆ ಎಂದು ಟೀಕಿಸಿದ್ದಾರೆ. ಇತ್ತೀಚಿಗಷ್ಟೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲೂ ಲವ್ ಜೆಹಾದ್ ಕಾನೂನು ಜಾರಿಯಾಗಲಿದೆ ಎಂದಿದ್ದರು. ‘

ಆ ಬಳಿಕ ರಾಜ್ಯದಲ್ಲಿ ಈ ಬಗ್ಗೆ ಚರ್ಚೆ ತೀವ್ರಗೊಂಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾವ ಮುಖಂಡರ ಮಕ್ಕಳು ಯಾರನ್ನೂ ಲವ್ ಮಾಡಿದ್ದಾರೆ ಎಂಬುದನ್ನು ಗಮನಿಸಿ ಈ ಕಾನೂನು ತರಲಿ ಎಂದಿದ್ದರು. ಆದರೆ ಈಗ ಬಿಜೆಪಿ ಸರ್ಕಾರ  ಈ ಎಲ್ಲ ವಿರೋಧಗಳಿಗೆ ಸೊಪ್ಪು ಹಾಕದೇ ಕಾನೂನು ಜಾರಿಗೆ ಚಿಂತನೆ ನಡೆಸಿದೆ.

ಇನ್ನು ಕೊರೋನಾ ಹಿನ್ನೆಲೆಯಲ್ಲಿ ಹೊಸವರ್ಷಾಚರಣೆಗೆ ಬ್ರೇಕ್ ಹಾಕುವ ಕುರಿತು ಮಾತನಾಡಿದ ಬೊಮ್ಮಾಯಿ, ನಿಷೇಧ ಹೇರುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಜನರು ಒಂದೆಡೆ ಸೇರುವುದನ್ನು ನಿಯಂತ್ರಿಸುವ ಪ್ರಸ್ತಾಪವಿದೆ. ಈ ಬಗ್ಗೆ ಇನ್ನೆರಡು ದಿನದಲ್ಲಿ ತೀರ್ಮಾನ ಹೊರಬರಲಿದೆ ಎಂದಿದ್ದಾರೆ.

Comments are closed.