ಯಕ್ಷರಂಗದ ಮೇರು ನಟ ಹಡಿನಬಾಳ ಶ್ರೀಪಾದ ಹೆಗಡೆ ಇನ್ನಿಲ್ಲ

ಯಕ್ಷರಂಗದ ಹಿರಿಯ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ (67 ವರ್ಷ) ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರೀಯೆ ಇಂದು ಅವರ ಹುಟ್ಟೂರಾಗಿರುವ ಹಡಿನಬಾಳದಲ್ಲಿ ನಡೆಯಲಿದೆ.

ಕಳೆದೆರಡು ವರ್ಷಗಳ ಹಿಂದೆ ಸಂಭವಿಸಿದ್ದ ಅಪಘಾತವೊಂದರಲ್ಲಿ ಶ್ರೀಪಾದ ಹೆಗಡೆ ಅವರ ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಮನೆಯಲ್ಲಿಯೇ ವಿಶ್ರಾಂತಿಯನ್ನು ಪಡೆಯುತ್ತಿದ್ದು. ಆದ್ರೆ ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಗುಡಬಾಳ ಮೇಳದಲ್ಲಿ ಬಣ್ಣ ಹಚ್ಚಿದ್ದ ಹಡಿನಬಾಳ ಶ್ರೀಪಾದ ಹೆಗಡೆ ಅವರು ಕೆರೆಮನೆ ಮೇಳದ ಖಾಯಂ ಸದಸ್ಯರಾಗಿದ್ದರು. ತೆಂಕು ಹಾಗೂ ಬಡಗು ತಿಟ್ಟುಗಳ ಹಲವು ಮೇಳಗಳಲ್ಲಿ ದುಡಿದಿದ್ದಾರೆ. ವಿಭಿನ್ನ ವೇಷಗಾರಿಕೆ, ಮಾತುಗಾರಿಕೆಯಿಂದಲೇ ಯಕ್ಷ ಪ್ರಿಯರ ಹೃದಯವನ್ನು ಗೆದ್ದಿರುವ ಹಡಿನಬಾಳ ಅವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಅಪಘಾತದ ನಂತರದಲ್ಲಿ ಹಡಿನಬಾಳ ಅವರು ಯಕ್ಷಗಾನದಿಂದ ದೂರ ಉಳಿದಿದ್ದರು. ಈ ವೇಳೆಯಲ್ಲಿ ಹಲವು ಯಕ್ಷಗಾನ ಅಭಿಮಾನಿಗಳು ಸಹಾಯ ಹಸ್ತವನ್ನು ಚಾಚಿದ್ದರು. ಹಡಿನ ಬಾಳ ಶ್ರೀಪಾದ ಹೆಗಡೆ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಶ್ರೀಪಾದ ಹೆಗಡೆ ಅವರ ನಿಧನಕ್ಕೆ ಯಕ್ಷಗಾನ ಕಲಾವಿದರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Comments are closed.