ಆಣೆ ಪ್ರಮಾಣಕ್ಕೆ ಮತ್ತೆ ಜೀವತುಂಬಿದ ಬೈ ಎಲೆಕ್ಷನ್…! ತಿರುಪತಿಯಲ್ಲಿ ಆಣೆ ಮಾಡಿ ಎಂದು ಮುನಿರತ್ನಗೆ ಡಿಕೆಎಸ್ ಸವಾಲು…!

ಬೆಂಗಳೂರು: ಆರ್.ಆರ್.ನಗರ ಬೈ ಎಲೆಕ್ಷನ್ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು,  ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಮೂರು ಪಕ್ಷದ ಅಭ್ಯರ್ಥಿಗಳು ಮನೆ-ಮನೆಗೆ ತೆರಳಿ ಜನರ ಮನವೊಲಿಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಸಂಸದ ಡಿ.ಕೆ.ಸುರೇಶ್ ತಿರುಪತಿಗೆ ತೆರಳಿ ಆಣೆ ಮಾಡುವಂತೆ ಸವಾಲು ಹಾಕಿದ್ದಾರೆ.

ಆರ್.ಆರ್.ನಗರ ಉಪಚುನಾವಣೆ ಘೋಷಣೆಯಾದಾಗಿನಿಂದ ಕಾಂಗ್ರೆಸ್ ನಾಯಕರು ಮಾಜಿ ಶಾಸಕ ಮುನಿರತ್ನ ವಿರುದ್ಧ ತಿರುಗಿಬಿದ್ದಿ ದ್ದಾರೆ. ಬಿಜೆಪಿಯಿಂದ ಟಿಕೆಟ್ ಪಡೆದಿರುವ ಮುನಿರತ್ನ ಹಣಕ್ಕಾಗಿ ಕಾಂಗ್ರೆಸ್ ತೊರೆದಿದ್ದಾರೆ ಎಂದು ಆರೋಪಿಸುತ್ತಲೇ ಇದ್ದಾರೆ. ಡಿ.ಕೆ. ಶಿವಕುಮಾರ್, ಸಿದ್ಧರಾಮಯ್ಯ ಸೇರಿದಂತೆ ಎಲ್ಲ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.

ಈ ಆರೋಪಗಳಿಗೆ ಉತ್ತರಿಸಿದ ಬಿಜೆಪಿ ಅಭ್ಯರ್ಥಿ ಮುನಿರತ್ನ, ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಬಂದಿದ್ದೇನೆಯೇ ಹೊರತು ಯಾರಿಂದಲೂ ಹಣ ಪಡೆದಿಲ್ಲ. ಬೇಕಿದ್ದರೇ ಈ ಬಗ್ಗೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲು ಸಿದ್ಧ ಎಂದಿದ್ದರು. ಯಾರೂ ಬೇಕಾದರೂ ಬರಲಿ ನಾನು ಹಣ ಪಡೆದಿಲ್ಲ ಎಂದು ಆಣೆ ಮಾಡಲು ಸಿದ್ಧ ಎಂದಿದ್ದರು.

ಈ ಆಣೆ-ಪ್ರಮಾಣದ ಆಹ್ವಾನಕ್ಕೆ ಉತ್ತರ ನೀಡಿರುವ ಸಂಸದ ಡಿ.ಕೆ.ಸುರೇಶ್, ಮುನಿರತ್ನ ಅಷ್ಟು ಪ್ರಾಮಾಣಿಕರಾಗಿದ್ದರೇ, ತಿರುಪತಿ ತಿಮ್ಮಪ್ಪನ ಎದುರು ನಾನು ಮತದಾರ ಗುರುತಿನ ಚೀಟಿ ಅವ್ಯವೆಹಾರ ನಡೆಸಿಲ್ಲ ಎಂದು ಪ್ರಮಾಣ ಮಾಡಲಿ ಎಂದಿದ್ದಾರೆ. ಬೇಕಿದ್ದರೇ ಟಿವಿ ಚಾನೆಲ್ ನವರನ್ನು ಕರೆದುಕೊಂಡು ಹೋಗಿ ಪ್ರಮಾಣ ಮಾಡಿ ರಾಜ್ಯದ ಜನತೆಗೆ ತೋರಿಸಲಿ ಎಂದು ಲೇವಡಿ ಮಾಡಿದ್ದಾರೆ.

ನಿನ್ನೆಯಷ್ಟೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದ ಮುನಿರತ್ನ 2023 ಕ್ಕೆ ಕಾಂಗ್ರೆಸ್ ರಾಜ್ಯದಲ್ಲಿ ಅಂತ್ಯಗೊಳ್ಳಲಿದೆ ಎಂದಿದ್ದರು. ಇದರೊಂದಿಗೆ ಈ ಮುನಿರತ್ನ ವಿರುದ್ಧ ಡಿಕೆ ಸುರೇಶ್ ಪ್ರಮಾಣ ಮಾಡೋ ಸವಾಲು ಎಸೆದಿದ್ದು, ಈ ಸವಾಲಿಗೆ ಮುನಿರತ್ನ ಯಾವ ರೀತಿ ಉತ್ತರಿಸುತ್ತಾರೆ ಕಾದು ನೋಡಬೇಕಿದೆ. ನಾಳೆ ಮತದಾನ ನಡೆಯಲಿದ್ದು, ನವೆಂಬರ್ 10 ರಂದು ಫಲಿತಾಂಶ ಘೋಷಣೆಯಾಗಲಿದೆ.

Comments are closed.