KS Eshwarappa : ಇಂದೇ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ : ಬಿಜೆಪಿ ಹೈಕಮಾಂಡ್‌ನಿಂದ ಖಡಕ್‌ ವಾರ್ನಿಂಗ್‌

ಬೆಂಗಳೂರು : ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣ ಇದೀಗ ಸಚಿವ ಈಶ್ವರಪ್ಪ ಅವರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಸಂತೋಷ್‌ ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್‌ನೋಟ್‌ನಲ್ಲಿ ತನ್ನ ಸಾವಿಗೆ ಸಚಿವ ಈಶ್ವರಪ್ಪನೇ ಕಾರಣ ಎಂದು ಬರೆದಿದ್ದಾರೆ. ರಾಜ್ಯದಾದ್ಯಂತ ಈಶ್ವರಪ್ಪ ರಾಜೀನಾಮೆಗೆ ಒತ್ತಡ ಕೇಳಿಬಂದ ಬೆನ್ನಲ್ಲೇ ಪಕ್ಷದ ಹೈಕಮಾಂಡ್‌ ಕೂಡ ರಾಜೀನಾಮೆಗೆ ಸೂಚಿಸಿದೆ ಎನ್ನಲಾಗುತ್ತಿದೆ. ಹೀಗಾಗಿ ಸಚಿವ ಈಶ್ವರಪ್ಪ ಇಂದೇ ರಾಜೀನಾಮೆ ನೀಡುವ ಸಾಧ್ಯತೆಯಿದೆ.

ಉಡುಪಿಯ ಲಾಡ್ಜ್‌ನಲ್ಲಿ ಸಂತೋಷ್‌ ಪಾಟೀಲ್‌ ಎಂಬ ಗುತ್ತಿಗೆದಾರ ವಿಷ ಸೇವಿಸಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸಾವಿಗೆ ಈಶ್ವರಪ್ಪ ಕಾರಣ ಅನ್ನೋ ಆರೋಪ ಕೇಳಿಬರುತ್ತಿದೆ. ಕಾಂಗ್ರೆಸ್‌ ಪಕ್ಷ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸುತ್ತಿದೆ. ಇನ್ನೊಂದೆಡೆ ಸಂತೋಷ್‌ ಪಾಟೀಲ್‌ ಸಹೋದರ ಉಡುಪಿ ಠಾಣೆಗೆ ದೂರು ನೀಡಿದ್ದು, ದೂರಿನಲ್ಲಿ ತನ್ನ ತಮ್ಮನ ಸಾವಿಗೆ ಕೆ.ಎಸ್.ಈಶ್ವರಪ್ಪ ಹಾಗೂ ಆಪ್ತರು ಕಾರಣ ಎಂದು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಇನ್ನೊಂದೆಡೆಯಲ್ಲಿ ಸಂತೋಷ್‌ ಪಾಟೀಲ್‌ ಪತ್ನಿ ಕೂಡ ತನ್ನ ಪತಿಯನ್ನು ಕೊಲೆ ಮಾಡಲಾಗಿದೆ ಅನ್ನೋ ಆರೋಪ ಮಾಡಿದ್ದಾರೆ. ತನ್ನ ಪತಿಗೆ ಈಶ್ವರಪ್ಪ ಮೋಸ ಮಾಡಿದ್ದಾರೆ. ಪತಿಯಿಂದ ಕೆಲಸ ಮಾಡಿಸಿಕೊಂಡು ನಂತರದಲ್ಲಿ ಬಿಲ್‌ ಪಾವತಿಸದೆ ಸತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಸಂತೋಷ್‌ ಪಾಟೀಲ್‌ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಸಚಿವ ಈಶ್ವರಪ್ಪ ವಿರುದ್ದ ಗಂಭೀರವಾದ ಆರೋಪ ಮಾಡಿದ್ದರು. ಕಾಮಗಾರಿಯ ಬಿಲ್‌ ಪಾವತಿಗೆ ಶೇ.೪೦ರಷ್ಟು ಲಂಚ ಕೇಳಿದ್ದಾರೆ ಎಂದು ಬಿಜೆಪಿ ಹೈಕಮಾಂಡ್‌ಗೆ ಸಂತೋಷ್‌ ದೂರು ನೀಡಿದ್ದರು. ಸಂತೋಷ್‌ ಪಾಟೀಲ್‌ ಆರೋಪದ ಬೆನ್ನಲ್ಲೇ ಈಶ್ವರಪ್ಪ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೀಗ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಈಶ್ವರಪ್ಪಗೆ ಸಂಕಷ್ಟವನ್ನು ತಂದೊಡ್ಡಿದೆ.

ರಾಜೀನಾಮೆ ಕೊಡಿ ಎಂದ ಬಿಜೆಪಿ ಹೈಕಮಾಂಡ್‌

ಇನ್ನು ಕೆ.ಎಸ್.ಈಶ್ವರಪ್ಪ ಅವರಿಂದ ರಾಜ್ಯದಲ್ಲಿ ಬಿಜೆಪಿಗೆ ಆಗುತ್ತಿರುವ ಮುಖಭಂಗವನ್ನು ತಪ್ಪಿಸುವ ಸಲುವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸುವಂತೆ ಈಗಾಗಲೇ ಬಿಜೆಪಿ ಹೈಕಮಾಂಡ್‌ ಕೆ.ಎಸ್.ಈಶ್ವರಪ್ಪ ಅವರಿಗೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಕೇಸರಿ ಬಾವುಟ ಹಾರಾಟಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಹೇಳಿಕೆ ನೀಡಿದ ಹೊತ್ತಲ್ಲೇ ಕಾಂಗ್ರೆಸ್‌ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿತ್ತು. ಆದರೆ ಹರ್ಷ ಕೊಲೆ ಪ್ರಕರಣದ ನಂತರ ಈಶ್ವರಪ್ಪ ಬಚಾವ್‌ ಆಗಿದ್ದರು. ಮುಂದಿನ ಒಂದು ವರ್ಷದಲ್ಲೇ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಎಫೆಕ್ಟ್‌ ಆಗುವ ಸಾಧ್ಯತೆಯಿದೆ. ಹೀಗಾಗಿ ಈಶ್ವರಪ್ಪ ರಾಜೀನಾಮೆಗೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಕುತೂಹಲ ಮೂಡಿಸಿದ ಈಶ್ವರಪ್ಪ ಸುದ್ದಿಗೋಷ್ಠಿ

ಸಚಿವ ಕೆ.ಎಸ್.ಈಶ್ವರಪ್ಪ ಇಂದು ಮಧ್ಯಾಹ್ನ ೧ ಗಂಟೆಗೆ ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿಯೇ ತಮ್ಮ ವಿರುದ್ದದ ಆರೋಪಕ್ಕೆ ಸ್ಪಷ್ಟನೆಯನ್ನು ನೀಡುತ್ತಾರಾ ? ಇಲ್ಲಾ ರಾಜೀನಾಮೆಯನ್ನು ನೀಡುತ್ತಾರಾ ಅನ್ನೋದು ಕುತೂಹಲ ಮೂಡಿಸಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈಶ್ವರಪ್ಪ ಇಂದೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿದ್ದ ಈಶ್ವರಪ್ಪ

ಪೊಲೀಸ್‌ ಅಧಿಕಾರಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಹೊತ್ತಲ್ಲೇ ಸಚಿವ ಕೆ.ಜೆ.ಜಾರ್ಜ್‌ ಅವರ ರಾಜೀನಾಮೆ ನೀಡುವಂತೆ ಕೆ.ಎಸ್.ಈಶ್ವರಪ್ಪ ಆಗ್ರಹವನ್ನು ಮಾಡಿದ್ದಾರೆ. ವಿಧಾನಸಭಾ ಅಧಿವೇಶನದಲ್ಲ ಈಶ್ವರಪ್ಪ ಆಗ್ರಹ ಮಾಡಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದೀಗ ಈಶ್ವರಪ್ಪ ಕೂಡ ರಾಜೀನಾಮೆ ನೀಡುವಂತೆ ಒತ್ತಾಯ ಕೇಳಿಬರುತ್ತಿದೆ.

KS Eshwarappa Resign Today Strong Warning from Bjp High Command

Comments are closed.