ಉಡುಪಿ : ಕರಾವಳಿಯಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ಜೋರಾಗಿದೆ. ಇದೀಗ ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಹಾಗೂ ಬೆಂಗಳೂರು ನಡುವೆ ಸಂಚರಿಸುವ ಬಸ್ಸಿನ ಚಾಲಕರಿಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ ಬಟ್ಟೆ ಅಂಗಡಿಯ ಮಾಲೀಕನಿಗೂ ಕೊರೊನಾ ಪಾಸಿಟಿವ್ ವರದಿಯಾಗಿರುವುದು ಆತಂಕವನ್ನು ಮೂಡಿಸಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಹೇಳಿದ್ದಾರೆ.

ಕುಂದಾಪುರ ಹಾಗೂ ಬೆಂಗಳೂರು ನಡುವೆ ಸಂಚಾರ ನಡೆಸುತ್ತಿದ್ದ ಬಸ್ಸಿನ ಚಾಲಕರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಚಾಲಕರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವವರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಬಸ್ಸಿನ ಪ್ರಯಾಣ ಮಾಡಿರುವವರಿಗೂ ಕೊರೊನಾ ಸೋಂಕು ಹರಡಿರುವ ಭೀತಿ ಎದುರಾಗಿದೆ. ಇನ್ನು ಸ್ಥಳೀಯ ಬಟ್ಟೆ ಅಂಗಡಿಯ ಮಾಲೀಕನಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಮಗ ಬೆಂಗಳೂರಿಗೆ ಹೋಗಿ ಬಂದಿದ್ದಾನೆ.

ಹೀಗಾಗಿ ಆತನನ್ನೂ ಕೂಡ ಕೊರೊನಾ ತಪಾಸಣೆಗೆ ಒಳಪಡಿಸಲಾಗಿದೆ. ಸ್ಥಳೀಯವಾಗಿಯೂ ಕೊರೊನಾ ಸೋಂಕು ಸಮುದಾಯಕ್ಕೆ ಹರಿಡಿದೆ ಅನ್ನುವ ಮಾತುಗಳು ಕೇಳಿಬರುತ್ತಿದೆ.