ರಿಕ್ಷಾ ಚಾಲಕನ ಮಗಳೀಗ ಮಿಸ್ ಇಂಡಿಯಾ ರನ್ನರ್ ಅಪ್…! ಇದು ಮನೆಗೆಲಸದಿಂದ ಮಾಡೆಲಿಂಗ್ ಸಾಗಿದ ಮಾನ್ಯಾ ಕತೆ…!!

ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಈ ಮಾತನ್ನು ರಿಕ್ಷಾ ಚಾಲಕನ ಮಗಳು ಮಿಸ್ ಇಂಡಿಯಾ ರನ್ನರ್ ಅಪ್ ಆಗುವ ಮೂಲಕ ಸಾಬೀತು ಪಡಿಸಿದ್ದಾಳೆ.

ಉತ್ತರ ಪ್ರದೇಶದ ಖುಷಿ ನಗರ ನಿವಾಸಿ ಮಾನ್ಯಾ ಸಿಂಗ್ ರಿಕ್ಷಾ ಚಾಲಕನ ಮಗಳು. ಅತ್ಯಂತ ಬಡತನದಲ್ಲಿ ಬಾಲ್ಯವನ್ನು ಕಳೆದ ಮಾನ್ಯಾ ಓದುತ್ತಿದ್ದಾಗಲೇ ಮನೆಗೆಲಸ ಹಾಗೂ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿ ಓದಿನ ಹಣವನ್ನು ಗಳಿಸಿಕೊಳ್ಳುತ್ತಿದ್ದರು.

ಹೀಗೆ ಕಷ್ಟದ ದಿನಗಳನ್ನು ಕಳೆದ ಮಾನ್ಯಾ ೧೨ ತರಗತಿಯಲ್ಲಿ ರ್ಯಾಂಕ್ ಪಡೆದು ತನ್ನ ಪ್ರತಿಭೆ ಸಾಬೀತುಪಡಿಸಿದ್ದಳು. ಈಗ ಮಿಸ್ ಇಂಡಿಯಾ ರನ್ನರ್ ಅಪ್ ಸ್ಥಾನ ಪಡೆದು ಸಾಧನೆಗೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ದುಡಿದ ಹಣ ಉಳಿಸಲು ಎಷ್ಟೋ ದಿನ ಉಪವಾಸ ಇದ್ದ ಈ ಕುಟುಂಬ ಮಗಳ ಹವ್ಯಾಸ ಕ್ಕೆ ಬೆಂಬಲವಾಗಿ ನಿಂತಿತ್ತು. ಮೈಲುಗಟ್ಟಲೇ ನಡೆದು ತನ್ನ ಖರ್ಚಿನ ಹಣವನ್ನು ಉಳಿಸಿಕೊಂಡು ಮಾಡೆಲಿಂಗ್ ಮೂಲಕ ಗುರುತಿಸಿಕೊಂಡ ಮಾನ್ಯಾ ತನ್ನಿಷ್ಟದಂತೆ ಮಿಸ್ ಇಂಡಿಯಾದಲ್ಲಿ ಸ್ಪರ್ಧಿಸಿದ್ದರು.

ಕೊನೆಯ ಸುತ್ತಿನವರೆಗೆ ತಲುಪಿದ ಮಾನ್ಯಾ ಅಂತಿಮ ಸುತ್ತಿನಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಆದರೂ ಮಾನ್ಯಾಗೆ ತನ್ನ ಸಾಧನೆ ಖುಷಿ ಕೊಟ್ಟಿದೆಯಂತೆ.

ಮಾನ್ಯಾ ತಂದೆ ಖುಷಿ ನಗರದಲ್ಲಿ ಅಟೋ ಓಡಿಸಿ ಬದುಕುತ್ತಿದ್ದು, ತಂದೆ ಹಾಗೂ ತಾಯಿ ನನ್ನ ಎಲ್ಲ ಸಾಧನೆಗೆ ಬೆಂಬಲ‌ ನೀಡಿದರು ಎಂದು ಮಾನ್ಯಾ ಸಿಂಗ್ ಖುಷಿಯಿಂದ ಹೇಳಿಕೊಂಡಿದ್ದಾರೆ.

ಮಾನ್ಯಾ ಸಾಧನೆಗೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದ್ದು ಜನರು ಅಟೋ ಚಾಲಕನ ಮಗಳು ಬೆಳೆದ ಎತ್ತರ ಕಂಡು ಶ್ಲಾಘಿಸುತ್ತಿದ್ದಾರೆ.

Comments are closed.