ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಖಚಿತ : ಪ್ರಧಾನಿ ನರೇಂದ್ರ ಮೋದಿ

0

ನವದೆಹಲಿ : ಸಮಯ ತುಂಬಾ ವೇಗವಾಗಿ ಬದಲಾಗುತ್ತಿದೆ. ಆದರೆ ಶಿಕ್ಷಣ ನೀತಿಯಲ್ಲಿ ಅಂತಹ ಬದಲಾವಣೆಯಾಗಿಲ್ಲ. ಶಿಕ್ಷಣ ನೀತಿ ಬದಲಾವಣೆಯನ್ನು ದೇಶದ ಜನರು ಬಯಸುತ್ತಿದ್ದಾರೆ. ರಾಷ್ಟ್ರೀಯ ಗುರಿಗಳಿಗೆ ಅನುಸಾರವಾಗಿ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದರೆ ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜಾರಿಯಲ್ಲಿರುವ 10+2 ಶಿಕ್ಷಣ ವ್ಯವಸ್ಥೆಯ ಬದಲಾಗಿ, 5+3+3+4 ಹಂತಗಳಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ. 5ನೇ ತರಗತಿಯವರೆಗೆ ಮಾತೃಭಾಷೆಯಲ್ಲಿಯೇ ಮಗುವಿನ ಶಿಕ್ಷಣವನ್ನು ನೀಡಲಾಗುತ್ತದೆ. ಮಾತೃಭಾಷೆಯ ಶಿಕ್ಷಣದಿಂದ ಮಕ್ಕಳ ಕಲಿಕೆಯ ವೇಗವನ್ನು ಹೆಚ್ಚಿಸುತ್ತದೆ. ಪ್ರಶ್ನೆ, ಸಂಶೋಧನೆ, ವಿಮರ್ಷೆಯ ಆಧಾರದಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಲಾಗುತ್ತದೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶೈಕ್ಷಣಿಕ ಸಂಸ್ಥೆಗಳ ಮೂಲಕ ಜಾರಿಗೊಳಿಸಲಾಗುತ್ತದೆ. ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ವಾಯತ್ತಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಸ್ವಾಯತ್ತಗೊಳಿಸುವ ಪ್ರಕ್ರಿಯೆಗೆ ಇನ್ನಷ್ಟು ಚುರುಕು ನೀಡಲಾಗುತ್ತಿದೆ. ಶೈಕ್ಷಣಿಕ ಸಂಸ್ಥೆಗಳ ಸ್ವಾಯತ್ತತೆಯ ಬಗ್ಗೆ ಎರಡು ಬಗೆಯ ವಾದಗಳಿವೆ. ಒಂದು ಶೈಕ್ಷಣಿಕ ಸಂಸ್ಥೆಗಳು ಸರಕಾರದ ಹಿಡಿತದಲ್ಲಿರಬೇಕು ಅಂತಿದ್ರೆ, ಇನ್ನೊಂದು ವಾರದ ಸರಕಾರದ ಹಿಡಿತದಲ್ಲಿರಬಾರದು ಅನ್ನುವುದು. ಆದರೆ ಉತ್ತಮ ಫಲಿತಾಂಶವನ್ನು ನೀಡುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ವಾಯತ್ತಗೊಳಿಸಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ ಉತ್ತಮ ಮಾನವರನ್ನು ರೂಪಿಸುವುದು ಎಂದು ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಶಿಕ್ಷಕರು ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಶಿಕ್ಷಕರು ಕಲಿತಾಗ ದೇಶ ಮುಂದುವರಿಯುತ್ತದೆ. ಶಿಕ್ಷಕರ ಘನತೆಯನ್ನು ಹೆಚ್ಚಿಸುವ ಗುರಿಯೂ ರಾಷ್ಟ್ರೀಯ ಶಿಕ್ಷಣ ನೀತಿ ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಪನ್ಮೂಲವನ್ನು ಕ್ರೂಢೀಕರಿಸುವ ಕಾರ್ಯವೂ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಕೌಶಲ್ಯವನ್ನು ತುಂಬಿ ಜಾಗೃತ ಸಮಾಜ ನಿರ್ಮಾಣ ಶಿಕ್ಷಕರಿಂದ ಮಾತ್ರವೇ ಸಾಧ್ಯ,. ಆ ನಿಟ್ಟಿನಲ್ಲಿ ಶಿಕ್ಷಣ ನೀತಿ ಅವಕಾಶವನ್ನು ಕಲ್ಪಿಸುತ್ತದೆ.

ಕೇವಲ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಲ್ಲ. ಪದವಿ ಶಿಕ್ಷಣ ವ್ಯವಸ್ಥೆಯಲ್ಲಿಯೂ ಭಾರೀ ಬದಲಾವಣೆಯನ್ನು ತರಲಾಗುತ್ತಿದೆ. ಇನ್ಮುಂದೆ ಪದವಿ ಶಿಕ್ಷಣ ವ್ಯವಸ್ಥೆಯಲ್ಲಿ ಕಲಾವಿಭಾಗ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ ಎಂಬ ಬೇಧವಿರುವುದಿಲ್ಲ. ಅಲ್ಲದೇ ಮಧ್ಯದಲ್ಲಿಯೇ ಕೋರ್ಸ್ ನಿಲ್ಲಿಸುವವರಿಗೂ ಯಾವುದೇ ತಡೆಯಿರುವುದಿಲ್ಲ. ಒಂದು ಕೋರ್ಸ್ ಅರ್ಧದಲ್ಲಿಯೇ ಬಿಟ್ಟು ಇನ್ನೊಂದು ಕೌಶಲ್ಯ ವೃದ್ದಿಸುವ ಕೋರ್ಸ್ ಗೆ ಸೇರಬಹುದಾಗಿದೆ. ದೇಶದಲ್ಲಿ ಶಿಕ್ಷಣವನ್ನು ಪಡೆದವರು ದೇಶದಲ್ಲಿಯೇ ಉಳಿದುಕೊಳ್ಳಬೇಕು, ದೇಶದ ಅಭಿವೃದ್ದಿ ಶ್ರಮಿಸಬೇಕು ಅನ್ನುವುದು ಶಿಕ್ಷಣ ನೀತಿಯ ಉದ್ದೇಶವಾಗಿದೆ.

ವಿಶ್ವಾಸವನ್ನು ತುಂಬುವ ಶಿಕ್ಷಣ ನೀತಿಯನ್ನು ನೀಡಿರುವ ಡಾ.ಕಸ್ತೂರಿ ರಂಗನ್ ಅವರನ್ನು ಮೋದಿ ಹೊಗಳಿದ್ದಾರೆ. ಹೊಸ ಶಿಕ್ಷಣ ನೀತಿ ಭವಿಷ್ಯದ ತಂತ್ರಜ್ಞಾನಕ್ಕೆ ವಿದ್ಯಾರ್ಥಿಗಳನ್ನು ತಯಾರಿಗೊಳಿಸುತ್ತದೆ. ಸಂಶೋಧನೆ ಹಾಗೂ ಶಿಕ್ಷಣದ ಅಂತರವನ್ನು ಅಂತ್ಯಗೊಳಿಸುತ್ತದೆ. ಭಾರತದ ಬಗ್ಗೆ ಜಗತ್ತಿನ ನಿರೀಕ್ಷೆ ಹೆಚ್ಚಾಗಿದೆ. ರಾಷ್ಟ್ರೀಯ ಗುರಿಗಳಿಗೆ ಅನುಸಾರವಾಗಿ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಯುವಕರಿಗೆ ವಿಮರ್ಷಕ ಬುದ್ದಿ ಬೆಳೆಸಬೇಕಿದೆ. ಸುಮಾರು 4 ವರ್ಷಗಳ ನಿರಂತರ ಶ್ರಮ ಅಡಗಿದ್ದು, ಭಾರತದ ಜನರು ಜಾಗತಿಕ ನಾಗರೀಕರಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Leave A Reply

Your email address will not be published.