NPS ರದ್ದು, ಹಳೆ ಪಿಂಚಣಿ ಜಾರಿಗೆ ಆಗ್ರಹ : ಎನ್ ಪಿಎಸ್ ನೌಕರರಿಂದ ಪತ್ರಚಳುವಳಿ

ಬೆಂಗಳೂರು : ಸರಕಾರಿ ನೌಕರರಿಗೆ ಮಾರಕವಾಗಿರುವ ನೂತನ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಿ ಏಕರೂಪದ ಪಿಂಚಣಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಎನ್ ಪಿಎಸ್ ನೌಕರರು ಪತ್ರಚಳುವಳಿಯ ಮೊರೆ ಹೋಗಿದ್ದಾರೆ.

2006ರ ಎಪ್ರಿಲ್ 1ರಿಂದ ನೂತನ ಪಿಂಚಣಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದ್ದು, ನಂತರದಲ್ಲಿ ಸರಕಾರಿ ಸೇವೆಗೆ ಸೇರ್ಪಡೆಯಾದವರು ಎನ್ ಪಿಎಸ್ ಯೋಜನೆಯಡಿಯಲ್ಲಿ ಒಳಪಟ್ಟಿದ್ದಾರೆ. ಆದರೆ ಎನ್ ಪಿಎಸ್ ಯೋಜನೆಯ ಕರಾಳತೆ ನಿವೃತ್ತಿಯ ನಂತರದ ಜೀವನಕ್ಕೆ ಮಾರಕವಾಗಿದೆ. ಎನ್ ಪಿಎಸ್ ಯೋಜನೆಯು ಷೇರು ಮಾರುಕಟ್ಟೆಗೆ ಆಧಾರಿತವಾಗಿದೆ. ಇದರಿಂದ ಕೊರೊನಾ ಹೊಡೆತಕ್ಕೆ ಸಿಲುಕಿ ಎನ್ ಪಿಎಸ್ ನೌಕರರು ತಮ್ಮ ಖಾತೆಯಿಂದ ಈಗಾಗಲೇ 50 ರಿಂದ 80 ಸಾವಿರಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ.

ಯೋಜನೆಯ ವಿರುದ್ದ ಈಗಾಗಲೇ ಸಾಕಷ್ಟು ಹೋರಾಟಗಳೇ ನಡೆದಿವೆ. ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಎನ್ ಪಿಎಸ್ ಯೋಜನೆಯನ್ನು ರದ್ದು ಪಡಿಸುವ ಭರವಸೆಯನ್ನು ಕೊಟ್ಟಿದ್ದರು. ಅಲ್ಲದೆ ಈಗಿನ ಸಚಿವರಾದ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಅವರು ಅಂದಿ ಸರಕಾರವನ್ನು ಆಗ್ರಹಿಸಿದ್ದರು.

ಭಾರತ ಸಂವಿಧಾನದ 13ನೇ ಪರಿಚ್ಛೇದದ ಆಶಯದಂತೆ ತಾವು ವಿರೋಧ ಪಕ್ಷದ ನಾಯಕರಾಗಿದ್ದಾಗ ಕೊಟ್ಟಿರುವ ಭರವಸೆಯನ್ನು ಈಡೇರಿಸುವ ಮೂಲಕ 2.25 ಲಕ್ಷ ನೌಕರರ ಮನೆಯನ್ನು ನಿಶ್ಚಿತ ಪಿಂಚಣಿಯ ದೀಪ ಬೆಳಗುವಂತೆ ಮಾಡಿ ಎಂದು ಪತ್ರದಲ್ಲಿ ಬರೆಯಲಾಗಿದೆ.

ರಾಜ್ಯದಾದ್ಯಂತ ಈ ಅಭಿಮಾನ ನಡೆಯುತ್ತಿದ್ದು, ಎನ್ ಪಿಎಸ್ ನೌಕರರು ಕೂಡ ಪತ್ರ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಜ್ಯ ಸರಕಾರ ಎನ್ ಪಿಎಸ್ ಯೋಜನೆಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪತ್ರ ಚಳುವಳಿಯನ್ನು ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಎನ್ ಪಿಎಸ್ ನೌಕರರ ಸಂಘದ ಅಧ್ಯಕ್ಷ ರಾಘವ ಶೆಟ್ಟಿ ಅವರು ಮನವಿ ಮಾಡಿದ್ದಾರೆ.

Comments are closed.