- ರಕ್ಷಾ ಬಡಾಮನೆ
ದೇಹದ ಆರೋಗ್ಯ ವೃದ್ದಿಗಾಗಿ ಹಣ್ಣುಗಳನ್ನು ಸೇವನೆ ಮಾಡುತ್ತೇವೆ. ಈ ಹಣ್ಣುಗಳು ನಮ್ಮ ದೇಹದ ಆರೋಗ್ಯಕ್ಕೆ ಲಾಭವನ್ನು ತರುತ್ತದೆ ಅನ್ನೋದು ಗೊತ್ತು. ಅದ್ರಲ್ಲೂ ಎಳೆಯರಿಂದ ಇಳಿವಯಸ್ಸಿನವರಿಗೂ ಇಷ್ಟವಾಗುವ ಕಿತ್ತಳೆ ಹಣ್ಣು ತಿಂದ್ರೆ ನಮಗೆ ಯಾವೆಲ್ಲಾ ಲಾಭಗಳಿವೆ ಅನ್ನೋದನ್ನು ತಿಳದುಕೊಳ್ಳಿ.

ನೈಸರ್ಗಿಕವಾಗಿ ಲಭ್ಯವಾಗುವ ಹಣ್ಣುಗಳು ಮನುಷ್ಯನ ದೇಹದ ಕೊಬ್ಬಿನ ಅಂಶದ ಕಡಿವಾಣ ಹಾಕುವ ಹಣ್ಣುಗಳಲ್ಲಿ ಕಿತ್ತಳೆಯ ಹಣ್ಣು ಬಹುಮುಖ್ಯವಾದ ಪಾತ್ರವಹಿಸುತ್ತದೆ. ವಿಶಿಷ್ಟವಾಗಿರೋ ಬಣ್ಣದಿಂದಲೇ ಎಲ್ಲರನ್ನು ಆಕರ್ಷಿಸೋ ಕಿತ್ತಳೆ ಸಿಹಿ, ಹುಳಿಯ ಮಿಶ್ರಿತ ರುಚಿ ಎಂತವರಿಗೂ ತಿನ್ನಬೇಕು ಅನಿಸದೇ ಇರದು. ವಿಟಮಿನ್, ಫೈಬರ್ ಮತ್ತು ಖನಿಜದ ಅಂಶಗಳನ್ನು ಒಳಗೊಂಡಿರುವ ಕಿತ್ತಳೆಯ ಹಣ್ಣುಗಳು ಪೌಷ್ಟಿತ ಸತ್ವಗಳನ್ನೂ ಒಳಗೊಂಡಿದ್ದು, ಆರೋಗ್ಯಕ್ಕೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತಿದೆ. ಇತರ ಹಣ್ಣುಗಳಿಗೆ ಹೋಲಿಸಿದ್ರೆ ಕಿತ್ತಳೆ ಹಣ್ಣು ತುಂ ಬಾ ಕಡಿಮೆ ಮಟ್ಟದ ಕ್ಯಾಲೋರಿಯನ್ನು ಹೊಂದಿರುತ್ತದೆ. ವಿಟಮಿನ್ ಸಿ ಅಂಶ ಕಿತ್ತಳೆ ಹಣ್ಣುಗಳಲ್ಲಿ ಯಥೇಚ್ಛವಾಗಿದೆ.

ಕಿತ್ತಳೆ ಹಣ್ಣಿನಲ್ಲಿರುವ ಫೋಲೇಟ್ ಮತ್ತು ಫೋಲಿಕ್ ಆಮ್ಲವು ಮೆದುಳಿನ ಬೆಳವಣಿಗೆ ಪೂರಕವಾಗಿದೆ. ಮಾತ್ರವಲ್ಲ ಫೋಲೇಟ್ ಮತ್ತು ಫೋಲಿಕ್ ಆಮ್ಲವು ಗರ್ಭಿಣಿಯರ ಆರೋಗ್ಯಕ್ಕೂ ಉತ್ತಮ. ಗರ್ಭಿಣಿಯರು ಕಿತ್ತಳೆ ತನ್ನುವುದರಿಂದ ಮಗುವಿಗೆ ಬರಬಹುದಾದ ನರಕ್ಕೆ ಸಂಬಂಧಿಸಿದ ಕಾಯಿಲೆಗಳು ಬಾರದಂತೆ ತಡೆಯುತ್ತದೆ.

ಕಿತ್ತಳೆಯ ಅನುಕೂಲ ಅಷ್ಟಿಷ್ಟಲ್ಲ. ಕ್ಯಾನ್ಸರ್ ರೋಗದ ವಿರುದ್ದ ಹೋರಾಡುವ ಶಕ್ತಿ ಕಿತ್ತಳೆಯ ಹಣ್ಣಿಗಿದೆ ಅಂದ್ರೆ ನಂಬೋದಕ್ಕೆ ಸಾಧ್ಯಾನಾ. ಕಿತ್ತಳೆ ಹಣ್ಣಿನಲ್ಲಿರುವ ಡಿ – ಲಿಮೋನೆನ್ ಎಂಬ ಸಂಯುಕ್ತ ಶ್ವಾಸಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ತಡೆಯುವ ಶಕ್ತಿಯನ್ನು ಹೊಂದಿದೆ ಎನ್ನುವುದು ಸಂಶೋಧನೆಯಿಂದ ದೃಢಪಟ್ಟಿದೆ. ಅದರಲ್ಲೂ ಹಣ್ಣೀನಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕ್ಯಾನ್ಸರ್ ವಿರುದ್ದ ಹೋರಾಡಲು ಸಹಕಾರಿಯಾಗಿದೆ.

ಕೂದಲು ಉದುರುವ ಸಮಸ್ಯೆಯಿಂದ ಮುಕ್ತರಾಗೋದಕ್ಕೆ ಕಿತ್ತಳೆ ಹಣ್ಣು ಉತ್ತಮ. ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ಕೂದಲಿಗೆ ಶಕ್ತಿ ಮತ್ತು ರಚನೆಯನ್ನು ಒದಗಿಸಲು ಪೂರಕವಾಗಿರುವ ಕಾಲಜನ್ ನ್ನು ಒದಗಿಸುತ್ತದೆ. ಕಾಲಜನ್ ಕೂದಲಿಗೆ ಶಕ್ತಿ ಮತ್ತು ರಚನೆ ಒದಗಿಸುತ್ತದೆ ಮತ್ತು ಕೂದಲನ್ನು ಒಡೆಯದಂತೆ ತಡೆಯುತ್ತದೆ. ಈ ಪೋಷಕಾಂಶವು ನಮ್ಮ ದೇಹದಿಂದ ನೈಸರ್ಗಿಕವಾಗಿ ಉತ್ಪತ್ತಿಯಾಗುವುದಿಲ್ಲ. ಹೀಗಾಗಿ ವಿಟಮಿನ್ ಸಿ ಭರಿತ ಸಿಟ್ರಸ್ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕಾಗುತ್ತದೆ.

ನಮ್ಮ ಆಹಾರ ಕ್ರಮಗಳಿಂದಲೇ ಇಂದು ಹಲವು ರೋಗಿಗಳಿಗೆ ತುತ್ತಾಗುತ್ತಿದ್ದೇವೆ. ಅದ್ರಲ್ಲೂ ಜಂಕ್ ಪುಡ್ ನಿಂದ ಹೃದ್ರೋಗಕ್ಕೆ ಕಾರಣವಾಗುತ್ತಿದೆ ಇಂತಹ ಆಹಾರ ಸೇವೆನೆಯಿಂದ ಅಪಧಮನಿ ನಿರ್ಬಂಧಿಸ ಲ್ಪಡುತ್ತದೆ. ಆದರೆ ಕಿತ್ತಳೆ ಹಸ್ಪೆರಿಡಿನ್ ನಂತಹ ಫ್ಲೇವೊನೈಡ್ ಗಳನ್ನು ಹೊಂದಿದ್ದು, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲ, ಅಪಧಮನಿಯನ್ನು ನಿರ್ಬಂಧಿಸದಂತೆ ತಡೆಯುತ್ತದೆ. ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಕಿತ್ತಳೆ ಹಣ್ಣಿನಲ್ಲಿ ಥಯಾಮಿನ್, ರಿಬೋಫ್ಲವಿನ್, ನಿಯಾಸಿನ್, ವಿಟಮಿನ್ ಬಿ -6, ಫೊಲೇಟ್, ಪ್ಯಾಂಟೊಥೆನಿಕ್ ಆಮ್ಲ, ರಂಜಕ, ಮೆಗ್ನೀಶಿಯಮ್, ಮ್ಯಾಂಗನೀಸ್, ಸೆಲೆನಿಯಮ್ ಮತ್ತು ತಾಮ್ರದ ಸತ್ವವಿದ್ದು, ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಕಿತ್ತಳೆ ಹಣ್ಣುಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಎಂತಹದ್ದೇ ರೋಗಗಳಿದ್ದರೂ ಕೂಡ ಅದರ ವಿರುದ್ದ ಹೋರಾಡುವ ಶಕ್ತಿ ಕಿತ್ತಳೆಯ ಹಣ್ಣಿಗಿದೆ.

ಕಿತ್ತಳೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಹೀಗಾಗಿ ಕಿತ್ತಳೆ ಹಣ್ಣನ್ನು ಸೇವನೆ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಹೀಗಾಗಿ ಚರ್ಮದ ಕಾಂತಿ ಕಳೆದುಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಮುಪ್ಪು ಬಂದವರಂತೆ ಕಾಣುವವರಿಗೆ ಕಿತ್ತಳೆಯ ಹಣ್ಣುಗಳು ಸಾಕಷ್ಟು ಅನುಕೂಲಕರವಾಗಿದೆ. ಕಿತ್ತಳೆ ಹಣ್ಣನ್ನು ಸೇವನೆ ಮಾಡುವದುರಿಂದ ವಯಸ್ಸಾದ್ರೂ ಯೌವನ ತುಂಬಿ ತುಳುಕುವಂತೆ ಮಾಡುತ್ತದೆ.

ಇತ್ತೀಚಿನ ವರ್ಷಗಳಲ್ಲಿ ದೃಷ್ಟಿ ಸಮಸ್ಯೆ ಎಲ್ಲರನ್ನೂ ಕಾಡುತ್ತಿರೋ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಆದ್ರೆ ಕಣ್ಣಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಬಯಸುವವರು ಕಿತ್ತಳೆಯ ಹಣ್ಣನ್ನು ಸೇವನೆ ಮಾಡುವುದು ಉತ್ತಮ. ಪ್ರತಿದಿನ ಕಿತ್ತಳೆ ತನ್ನುವುದಿಂದ ಕಿತ್ತಳೆಯಲ್ಲಿರುವ ವಿಟಮಿನ್ ಎ, ಸಿ ಮತ್ತು ಪೊಟ್ಯಾಶಿಯಂ ನಂತರ ಪೋಷಕಾಂಶಗಳು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ.