ರಾಮನಗರ : ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡು ಓಡುತ್ತಿದ್ದ ದರೋಡೆಕೋರನ ಮೇಲೆ ಪೊಲೀಸ್ ಫೈರಿಂಗ್ ನಡೆಸಿರೋ ಘಟನೆ ರಾಮನಗರದಲ್ಲಿ ನಡೆದಿದೆ.

ರಮೇಶ್ ಅಲಿಯಾಸ್ ಜಾಕಿ ಎಂಬಾತನೇ ಗಾಯಗೊಂಡಿರುವ ದರೋಡೆಕೋರ. ರಾಮನಗರದ ಕೆ.ಎಚ್.ಬಿ.ಕಾಲೋನಿಯಲ್ಲಿ ಶಿಕ್ಷಕ ಉತ್ತೇಶ್ ಎಂಬವರ ಮನೆಗೆ ನುಗ್ಗಿ ಲಾಂಗ್ ತೋರಿಸಿ ದರೋಡೆ ನಡೆಸಿದ್ದರು. ಈ ಪ್ರಕರಣದಲ್ಲಿ ರಮೇಶ್ ಪ್ರಮುಖ ಆರೋಪಿಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಮೇಶ್ ನನ್ನು ಬಂಧಿಸಿ, ಪೊಲೀಸರು ತನಿಖೆಗೆಂದು ಚಿಕ್ಕಮಳೂರು ಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆಯಲ್ಲಿ ಆರೋಪಿ ರಮೇಶ್ ಪೊಲೀಸ್ ಪೇದೆ ನಾಗರಾಜ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆಯಲ್ಲಿ ಸ್ಥಳದಲ್ಲಿದ್ದ ಇನ್ಸ್ಟೆಕ್ಟರ್ ವಸಂತ್ ಕುಮಾರ್ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.

ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ರಮೇಶ್ ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸ್ಥಳಕ್ಕೆ ರಾಮನಗರ ಎಸ್ ಪಿ ಅನೂಪ್ ಎ. ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.