ನಾಳೆ ನಡೆಯುತ್ತೆ ಪಿಯುಸಿ ಪರೀಕ್ಷೆ : ಸುರೇಶ್ ಕುಮಾರ್ -ಬೊಮ್ಮಾಯಿ ಚೆಲ್ಲಾಟ: ಅತಂತ್ರ ಸ್ಥಿತಿಯಲ್ಲಿ ಪಿಯುಸಿ ವಿದ್ಯಾರ್ಥಿಗಳು

0

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ 9 ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಿದೆ. ಅಲ್ಲದೇ ನಾಳೆ ರಾಜ್ಯದಾದ್ಯಂತ ಸಂಚಾರ ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ. ಹೀಗಿದ್ದರೂ ಕೂಡ ಸರಕಾರ ನಾಳೆ ಪಿಯುಸಿ ಪರೀಕ್ಷೆ ನಡೆಸಲು ಮುಂದಾಗಿರೋದು ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಆತಂಕವನ್ನು ಮೂಡಿಸಿದೆ.

ರಾಜ್ಯ ಸರಕಾರದ ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜನತಾ ಕರ್ಪ್ಯೂ ಬೆನ್ನಲ್ಲೇ ರಾಜ್ಯದಲ್ಲಿ ಸಂಚಾರ ನಿಷೇಧಿಸಲಾಗಿದೆ. ಮಾತ್ರವಲ್ಲ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಗಳೂರು, ಕೊಡಗು, ಬೆಳಗಾವಿ, ಮೈಸೂರು, ಕಲಬುರಗಿ, ಚಿಕ್ಕಬಳ್ಳಾಪುರ, ಧಾರವಾಡ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ನಾಳೆ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಬಂದ್ ಆಗಲಿದೆ. ಇಷ್ಟೆಲ್ಲಾ ಇದ್ರೂ ರಾಜ್ಯ ಸರಕಾರ ಹಾಗೂ ಶಿಕ್ಷಣ ಸಚಿವರು ಪಿಯುಸಿ ಪರೀಕ್ಷೆಯನ್ನು ಮುಗಿಸಿಯೇ ತೀರುವುದಾಗಿ ಹೇಳಿದ್ದಾರೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾರಿಗೆ ಸಂಪರ್ಕವಿಲ್ಲದೇ ಪರೀಕ್ಷಾ ಕೇಂದ್ರಗಳಿಗೆ ಬರುವುದು ತೀರಾ ಕಷ್ಟದ ಕೆಲಸ.

ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರುವ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದೇವೆ ಅಂತಾ ಹೇಳಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜಾರಿಕೊಂಡಿದ್ದಾರೆ. ಇನ್ನೊಂದೆಡೆ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಅಂತಾ ಟ್ವೀಟ್ ಮಾಡಿದ್ದಾರೆ. ಆದರೆ ಸಾರಿಗೆ ವ್ಯವಸ್ಥೆ ಇಲ್ಲದೇ ಇರೋದ್ರಿಂದ ಜಿಲ್ಲಾಧಿಕಾರಿಗಳು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತರುವುದು ಅಷ್ಟು ಸುಲಭದ ಮಾತಲ್ಲ.

ಹೀಗಿದ್ದರೂ ಸರಕಾರ ಪಿಯುಸಿ ಪರೀಕ್ಷೆಯನ್ನು ಮುಂದೂಡುವುದನ್ನು ಬಿಟ್ಟು ನಡೆಸಿಯೇ ತೀರುವುದಾಗಿ ಹೊರಟಿರೋ ಕ್ರಮದ ವಿರುದ್ದ ವ್ಯಾಪಕ ಠೀಕೆ ವ್ಯಕ್ತವಾಗುತ್ತಿದೆ. ಒಂದೊಮ್ಮೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗೋದಕ್ಕೆ ಸಾಧ್ಯವಾಗದೇ ಇದ್ರೆ ಯಾರು ಹೊಣೆ ಅಂತಾನೂ ಪೋಷಕರು ಪ್ರಶ್ನಿಸುತ್ತಿದ್ದಾರೆ. ಆದರೆ ರಾಜ್ಯ ಸರಕಾರ ಹಾಗೂ ಶಿಕ್ಷಣ ಸಚಿವರ ನಡುವಿನ ತಿಕ್ಕಾಟಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆಯೇ ಸರಕಾರ ಒಂದು ಹೇಳಿಕೆ ನೀಡುತ್ತಿದ್ರೆ, ಶಿಕ್ಷಣ ಸಚಿವರು, ಆಯುಕ್ತರು ಇನ್ನೊಂದು ಹೇಳಿಕೆಯನ್ನು ನೀಡೋ ಮೂಲಕ ವಿದ್ಯಾರ್ಥಿಗಳನ್ನು, ಪೋಷಕರನ್ನು ಹಾಗೂ ಶಿಕ್ಷಕರನ್ನು ಗೊಂದಲಕ್ಕೆ ಸಿಲುಕಿಸಿದ್ದರು. ಇದೀಗ ಪಿಯುಸಿ ಪರೀಕ್ಷಾ ವಿಚಾರದಲ್ಲಿಯೂ ಕೂಡ ಸರಕಾರ ವಿದ್ಯಾರ್ಥಿಗಳಿಗೆ ಸಂಕಷ್ಟವನ್ನು ತಂದೊಡ್ಡಿದೆ. ಒಂದೆಡೆ ಪರೀಕ್ಷಾ ಟೆನ್ಶನ್ ಆದ್ರೆ ಇನ್ನೊಂದೆಡೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವುದೇ ವಿದ್ಯಾರ್ಥಿಗಳಿಗೆ ಇದೀಗ ತಲೆನೋವಾಗಿ ಪರಿಣಮಿಸಿದೆ.

Leave A Reply

Your email address will not be published.